ಇಡೀ ಬೆಂಗಳೂರಿಗೆ ಒಂದು ನಿಯಮ, ಜಿಬಿಎಗೆ ಮತ್ತೊಂದು ನಿಯಮ? ಕಚೇರಿ ಆವರಣದಲ್ಲೇ ಇರುವ ಅನಾಥ ವಾಹನಗಳ ವಿರುದ್ಧ ಮೌನ!

ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಂತಿರುವ ಅನಾಥ ಹಾಗೂ ಬಳಕೆಯಲ್ಲದ ವಾಹನಗಳ ವಿರುದ್ಧ ಜಿಬಿಎ (GBA) ಸ್ಟಿಕ್ಕರ್ ಅಂಟಿಸಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ತನ್ನದೇ ಮುಖ್ಯ ಕಚೇರಿ ಆವರಣದಲ್ಲಿ ಹಲವು ದಿನಗಳಿಂದ ನಿಂತಿರುವ ವಾಹನಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ.

ಇಡೀ ಬೆಂಗಳೂರಿಗೆ ಒಂದು ನಿಯಮ, ಜಿಬಿಎಗೆ ಮತ್ತೊಂದು ನಿಯಮ? ಕಚೇರಿ ಆವರಣದಲ್ಲೇ ಇರುವ ಅನಾಥ ವಾಹನಗಳ ವಿರುದ್ಧ ಮೌನ!
ಜಿಬಿಎ ಕಚೇರಿ ಆವರಣದಲ್ಲೇ ಇರುವ ಅನಾಥ ವಾಹನಗಳು
Image Credit source: tv9

Updated on: Jul 13, 2026 | 7:10 AM

ಮುಖ್ಯಾಂಶಗಳು

  • ಜಿಬಿಎ ಕಚೇರಿ ಆವಣರದಲ್ಲೇ ಅನಾಥ ವಾಹನಗಳು
  • ನಗರದಲ್ಲಿ ಮಾತ್ರ ಕಟ್ಟುನಿಟ್ಟಿನ ಕಾರ್ಯಾಚರಣೆ
  • ದ್ವಂದ್ವ ನೀತಿಗೆ ಸಾರ್ವಜನಿಕರಿಂದ ಆಕ್ಷೇಪ

ಬೆಂಗಳೂರು, ಜುಲೈ 13: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಂತಿರುವ ಅನಾಥ ಹಾಗೂ ಬಳಕೆಯಲ್ಲದ ವಾಹನಗಳನ್ನು ಗುರುತಿಸಿ, ಅವುಗಳಿಗೆ ಎಚ್ಚರಿಕೆ ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಜಿಬಿಎ (GBA) ನಡೆಸುತ್ತಿದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದೇ ನಿಯಮ ಜಿಬಿಎ ತನ್ನದೇ ಕಚೇರಿ ಆವರಣದಲ್ಲಿ ಅನ್ವಯಿಸುತ್ತಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಜಿಬಿಎ ಮುಖ್ಯ ಕಚೇರಿ ಆವರಣದಲ್ಲೇ ಬಳಕೆಯಲ್ಲದ ಕಾರುಗಳು!

ಬಳಕೆಯಲ್ಲದ ಸ್ಥಿತಿಯಲ್ಲಿ ಕಾರುಗಳು ಜಿಬಿಎ ಮುಖ್ಯ ಕಚೇರಿ ಆವರಣದಲ್ಲಿ ಹಲವು ದಿನಗಳಿಂದ ನಿಂತಿರುವುದು ಕಂಡುಬಂದಿದೆ. ಕೆಲವು ವಾಹನಗಳ ಟೈರ್‌ಗಳು ಪಂಕ್ಚರ್ ಆಗಿದೆ. ಧೂಳು ಆವರಿಸಿರುವುದರಿಂದ ಅವು ಬಹಳ ದಿನಗಳಿಂದ ಬಳಸಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕರ್ನಾಟಕ ನೋಂದಣಿ ಹೊಂದಿರುವ ವಾಹನಗಳ ಜೊತೆಗೆ ಅನ್ಯರಾಜ್ಯದ ನೋಂದಣಿ ಸಂಖ್ಯೆಯ ಕಾರುಗಳೂ ಕಚೇರಿ ಆವರಣದಲ್ಲಿ ದೀರ್ಘಕಾಲದಿಂದ ನಿಂತಿವೆ.

ಜಿಬಿಎ ನಡೆಗೆ ಸಾರ್ವಜನಿಕರಿಂದ ಅಸಮಾಧಾನ

ನಗರದ ರಸ್ತೆಗಳಲ್ಲಿ ನಿಂತಿರುವ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ನೋಟಿಸ್ ನೀಡುವ ಅಧಿಕಾರಿಗಳು, ತಮ್ಮದೇ ಕಚೇರಿ ಆವರಣದಲ್ಲಿ ಇರುವ ಬಳಕೆಯಲ್ಲದ ವಾಹನಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ನಿಯಮ ಎಂದರೆ ಎಲ್ಲರಿಗೂ ಒಂದೇ ಆಗಬೇಕು. ಮೊದಲು ತಮ್ಮ ಕಚೇರಿ ಆವರಣದಲ್ಲಿ ಇರುವ ವಾಹನಗಳ ಪರಿಶೀಲನೆ ನಡೆಸಿ, ನಂತರ ನಗರದ ಜನರಿಗೆ ನಿಯಮ ಪಾಲನೆ ಬಗ್ಗೆ ಹೇಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್ 

ಸಾರ್ವಜನಿಕರ ಆರೋಪಗಳಿಗೆ ಜಿಬಿಎ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ, ನಗರದಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯ ಮಾದರಿಯಲ್ಲೇ ತನ್ನ ಕಚೇರಿ ಆವರಣದಲ್ಲಿರುವ ಬಳಕೆಯಲ್ಲದ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us