ಬೆಂಗಳೂರು-ಗೋವಾ ವಂದೇ ಭಾರತ್ ಸಂಚಾರ ಶುರು: ರೈಲಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಯಾಣಿಕರು
ಬೆಂಗಳೂರಿನಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಇಂದಿನಿಂದ ಆರಂಭವಾಗಿದೆ. ಯಶವಂತಪುರದಿಂದ ಮಡಗಾಂವ್‌ಗೆ ಕೇವಲ 12 ಗಂಟೆ 25 ನಿಮಿಷಗಳಲ್ಲಿ ತಲುಪುವ ಈ ರೈಲು, ಕರಾವಳಿ ಪ್ರಯಾಣಿಕರಿಗೆ ಹೊಸ ಭರವಸೆ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದ ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಪ್ರಯಾಣಿಕರ ಅನುಕೂಲತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮುಖ್ಯಾಂಶಗಳು
- ಯಶವಂತಪುರದಿಂದ- ಮಂಗಳೂರು-ಮಡಗಾಂವ್‌ಗೆ ಹೊರಟ ವಂದೇ ಭಾರತ್ ರೈಲು
- ಬೆಂಗಳೂರು–ಗೋವಾ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಿದ ಭಾರತೀಯ ರೈಲ್ವೆ
- ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಂಡ ಪ್ರಯಾಣಿಕರು
ಬೆಂಗಳೂರು, ನವೆಂಬರ್ 15: ಬೆಂಗಳೂರು ಮತ್ತು ಗೋವಾ ನಡುವಿನ ಬಹುನರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಆ ಮೂಲಕ ಬೆಂಗಳೂರು ಹಾಗೂ ಕರಾವಳಿ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಇದೀಗ ಇಂದು ಬೆಳಿಗ್ಗೆ 7:35ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಮಡಗಾಂವ್‌ಗೆ ಮೊದಲ ಪ್ರಯಾಣ ಆರಂಭಿಸಿದೆ. ಯಶವಂತಪುರದಿಂದ ಸಂಚರಿಸಲಿರುವ ಈ ರೈಲು ಬೆಂಗಳೂರು- ಮಂಗಳೂರು- ಗೋವಾ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಿದೆ.
670 ಕಿ.ಮೀ ಪ್ರಯಾಣ: 12 ಮಧ್ಯಂತರ ನಿಲುಗಡೆ
ಯಶವಂತಪುರದಿಂದ ಮಡಗಾಂವ್‌ವರೆಗೆ ಸುಮಾರು 670 ಕಿ.ಮೀ ದೂರವನ್ನು ಕ್ರಮಿಸಲಿರುವ ವಂದೇ ಭಾರತ್ ರೈಲು ಒಟ್ಟು 13 ಗಂಟೆ 20 ನಿಮಿಷಗಳ ಪ್ರಯಾಣದ ಅವಧಿಯನ್ನು ಹೊಂದಿದೆ. ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಸುಮಾರು 1,128 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು: ವಿಮಾನ ಪ್ರಯಾಣಕ್ಕಿಂತ ಇದು ಲಾಭದಾಯಕವೇ?
ಈ ರೈಲು ಮಾರ್ಗದಲ್ಲಿ ಒಟ್ಟು 12 ಮಧ್ಯಂತರ ನಿಲುಗಡೆಗಳಿವೆ. ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರದಲ್ಲಿ ನಿಲುಗಡೆ ಇರಲಿದೆ. ಈ ಮಾರ್ಗವಾಗಿ ರೈಲು ಗೋವಾದ ಮಡಗಾಂವ್ ತಲುಪಲಿದೆ.
ರೈಲಿನ ವೇಳಾಪಟ್ಟಿ ಹೇಗಿದೆ?
ಯಶವಂತಪುರದಿಂದ ಬೆಳಗ್ಗೆ 7:35ಕ್ಕೆ ಹೊರಡುವ ವಂದೇ ಭಾರತ್ ರೈಲು ರಾತ್ರಿ 8:55ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮರುದಿನ ಬೆಳಗ್ಗೆ 8:20ಕ್ಕೆ ಮಡಗಾಂವ್‌ನಿಂದ ಬೆಂಗಳೂರಿನತ್ತ ಪ್ರಯಾಣ ಆರಂಭಿಸಲಿದ್ದು, ರಾತ್ರಿ 9:15ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಈ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಯಶವಂತಪುರದಿಂದ ಹೊರಡುವ ರೈಲಿಗೆ ಬುಧವಾರ ವಾರದ ರಜೆಯಾದರೆ, ಮಡಗಾಂವ್‌ನಿಂದ ಹೊರಡುವ ರೈಲಿಗೆ ಗುರುವಾರ ವಾರದ ರಜೆ ಇರಲಿದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಎರಡು ರೀತಿಯ ಆಸನ ವ್ಯವಸ್ಥೆಗಳಿವೆ. ಅವುಗಳ ಟಿಕೆಟ್ ದರ ಹೀಗಿದೆ. ಎಸಿ ಚೇರ್ ಕಾರ್: 2,200 ರೂ, ಎಕ್ಸಿಕ್ಯೂಟಿವ್ ಚೇರ್ ಕಾರ್: 3,865 ರೂ.
ರೈಲಿನ ವಿಶೇಷತೆಗಳು
- ಸೆಮಿ ಹೈ ಸ್ಪೀಡ್ ತಂತ್ರಜ್ಞಾನ
- ಆರಾಮದಾಯಕ ಆಸನ ವ್ಯವಸ್ಥೆ, ಆಧುನಿಕ ಒಳಾಂಗಣ ವಿನ್ಯಾಸ
- ಆಟೋಮ್ಯಾಟಿಕ್ ಬಾಗಿಲುಗಳ ಸೌಲಭ್ಯ
- ಆಧುನಿಕ ಸುರಕ್ಷತಾ ವ್ಯವಸ್ಥೆಗಳೊಂದಿಗೆ ರೈಲು ಸಂಚಾರ
- ಪಶ್ಚಿಮ ಘಟ್ಟದ ಸುಂದರ ಪ್ರಕೃತಿ ಸೌಂದರ್ಯದ ನಡುವೆ ರೈಲು ಪ್ರಯಾಣ
- ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ ವೇಗದ ಮಿತಿ
- ಈ ಮಾರ್ಗದಲ್ಲಿ ಗರಿಷ್ಠ ಕಾರ್ಯಾಚರಣಾ ವೇಗ ಗಂಟೆಗೆ 54 ಕಿ.ಮೀ.
- ಘಾಟ್ ಪ್ರದೇಶದಲ್ಲಿ ಗಂಟೆಗೆ 30 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಸಂಚಾರ
ಸಾರ್ವಜನಿಕರಿಗೆ ಆಗುವ ಅನುಕೂಲಗಳು
ಬೆಂಗಳೂರು-ಗೋವಾ ನಡುವೆ ನೇರ ರೈಲು ಸಂಪರ್ಕ ಆರಂಭವಾಗಿರುವುದರಿಂದ ಕರಾವಳಿ ಕರ್ನಾಟಕದ ಜನರಿಗೆ ಬೆಂಗಳೂರಿಗೆ ಪ್ರಯಾಣಿಸಲು ಮತ್ತೊಂದು ಆಯ್ಕೆ ಸಿಕ್ಕಂತಾಗಿದೆ. ವಿಶೇಷವಾಗಿ ಮಂಗಳೂರು, ಉಡುಪಿ ಹಾಗೂ ಕುಂದಾಪುರ ಭಾಗದ ಪ್ರಯಾಣಿಕರಿಗೆ ಈ ರೈಲು ಅನುಕೂಲವಾಗಲಿದೆ.
ಇದನ್ನೂ ಓದಿ: ಬೆಂಗಳೂರು-ಮಡಗಾಂವ್ ವಂದೇ ಭಾರತ್ಗೆ ಚಾಲನೆ ಸೇರಿ ವಿವಿಧ ರೈಲ್ವೇ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
ಅಲ್ಲದೆ ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರದಂತಹ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಮೂಕಾಂಬಿಕಾ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೂ ಈ ರೈಲು ಪ್ರಯಾಣಕ್ಕೆ ನೆರವಾಗಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಯಾಣಿಕರು
ಇನ್ನು ಪ್ರಯಾಣಿಕರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ರೈಲಿನ ಮೊದಲ ಪ್ರಯಾಣದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Sun, 15 November 26




