ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ
ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ ಜನನಾಂಗಗಳನ್ನು, ಮೃದು ಹವಳ ಮತ್ತು ಹುಲಿ ಚರ್ಮವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಬಂಧಿತನಾಗಿದ್ದಾನೆ. ಪ್ರೀತಿ ವಶೀಕರಣ, ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಮಾಂತ್ರಿಕ ಶಕ್ತಿ ಇದೆ ಎಂದು ನಂಬಿಸಿ, ಪ್ರತಿ ತುಂಡಿಗೆ 10,000 ರೂ.ಗೆ ಮಾರುತ್ತಿದ್ದ. ಎನ್‌ಜಿಒ ಮಾಹಿತಿ ಆಧರಿಸಿ ಡಿಆರ್‌ಐ ದಾಳಿ ನಡೆಸಿ, ವನ್ಯಜೀವಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು, ಜ.11: ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ (Monitor lizard )ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿಗಾಗಿ ವಶೀಕರಣ, ಪ್ರೇಮ ವಿವಾಹದ ಕಲಹಗಳಿಗೆ ಈ ಹಲ್ಲಿಯ ಜನನಾಂಗವನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಮಾಂತ್ರಿಕ ಶಕ್ತಿ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ, ಪ್ರೇಮಿಗಳ ನಡುವಿನ ಘರ್ಷಣೆಯನ್ನು ಪರಿಹರಿಸಬಹುದು ಎಂದು ಹೇಳಿ ಪ್ರತಿ ತುಂಡನ್ನು 10,000 ರೂ.ಗೆ ಮಾರಾಟ ಮಾಡಿದನೆಂದು ವರದಿಯಾಗಿದೆ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ, ಎನ್‌ಜಿಒವೊಂದು ತನಿಖೆ ಮಾಡಲು ವೈಯಕ್ತಿಕ ಸಮಸ್ಯೆ ಎಂದು ನಟಿಸಿ, ಈ ವ್ಯಕ್ತಿಯ ಬಳಿ ಹೋಗಿದ್ದಾರೆ. ಈ ವೇಳೆ ಈ ದೇವಮಾನವನ ಸತ್ಯ ಬಯಲಾಗಿದೆ. ದೇವಮಾನವ ತನ್ನ ವನ್ಯಜೀವಿ ಉತ್ಪನ್ನಗಳ ಸಂಗ್ರಹವನ್ನು ಎನ್‌ಜಿಒ ಪ್ರತಿನಿಧಿಗೆ ತೋರಿಸಿದ್ದಾನೆ. ನಂತರ ಈ ವಿಷಯವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ವರದಿ ಮಾಡಲಾಯಿತು. ನಂತರ ಅವರನ್ನು ದಾಳಿ ಮಾಡಿ, ಸ್ವಯಂ ಘೋಷಿತ ದೇವಮಾನವನ ಬಂಧನ ಮಾಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮೂರ್ತಿ (45) ಎಂದು ಗುರುತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೃದು ಹವಳ ಮತ್ತು ಇತರ ವನ್ಯಜೀವಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದ, ಅದೃಷ್ಟ ಮತ್ತು ಸಮೃದ್ಧಿಗಾಗಿ ಮೃದುವಾದ ಹವಳವನ್ನು ತಾಲಿಸ್ಮನ್ ಆಗಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅನೇಕರು ಇದರ ಮಾರಾಟದ ಹಕ್ಕನ್ನು ಪಡೆದಿದ್ದರು. ಮೂರ್ತಿ ಈ ವನ್ಯಜೀವಿ ಉತ್ಪನ್ನಗಳನ್ನು ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಸಂಪರ್ಕಗಳ ಮೂಲಕ ಪಡೆಯುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಸುಮಾರು 25,000 ಜನ ಈತನ ಭಕ್ತರಾಗಿದ್ದರು. ಅವರಲ್ಲಿ ಹಲವರು ಪ್ರೀತಿ ಅಥವಾ ವೈಯಕ್ತಿಕ ಸಮಸ್ಯೆಗಳಿಗಾಗಿ ಮೂರ್ತಿಯನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಶಾನಿಯ ಆಸೆಯಿಂದ ಬೆತ್ತಲೆಯಾದ ಬೆಂಗಳೂರಿನ ಯುವಕ: ಖಾತೆಯಿಂದ ಹೋಯಿತು ಲಕ್ಷ ಲಕ್ಷ ಹಣ!
ಮೂರ್ತಿ ಆನ್‌ಲೈನ್ ವ್ಯವಹಾರದ ಬಗ್ಗೆ ಎನ್‌ಜಿಒ ಕೇರ್‌ಗೆ ಗುಪ್ತಚರ ಮಾಹಿತಿ ಬಂದ ನಂತರ ಕಾರ್ಯಾಚರಣೆ ಆರಂಭವಾಯಿತು. ಎನ್‌ಜಿಒ ಸದಸ್ಯರೊಬ್ಬರು ಮೂರ್ತಿಯ ಕ್ಲೈಂಟ್‌ನಂತೆ ನಟಿಸಿ ನಂತರ ನಾಗಶೆಟ್ಟಿಹಳ್ಳಿಯಲ್ಲಿರುವ ಮನೆಗೆ ಭೇಟಿ ನೀಡಿ, ನಂತರ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಾರೆ. ದಾಳಿಯ ಸಮಯದಲ್ಲಿ, ಅಧಿಕಾರಿಗಳು 206 ಮಾನಿಟರ್ ಹಲ್ಲಿ ಜನನಾಂಗಗಳು, 1.5 ಕೆಜಿ ಮೃದು ಹವಳ, ಹುಲಿ ಚರ್ಮ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರ್ತಿ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
