ಬೆಂಗಳೂರಿನಲ್ಲಿ ಬರೋಬ್ಬರಿ 1.28 ಕೋಟಿ ವಾಹನ ನೋಂದಣಿ: 1.50 ಕೋಟಿ ವಾಹನ ಸಂಚಾರ!
ಬೆಂಗಳೂರಿನ ಟ್ರಾಫಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಟ್ರಾಫಿಕ್ ನಿಯಂತ್ರಣಕ್ಕೆ ಅದೆಷ್ಟೇ ಸರ್ಕಸ್ ಮಾಡಿದರೂ ನಗರದಲ್ಲಿ ಸದ್ಯಕ್ಕಂತೂ ಸಂಚಾರ ದಟ್ಟಣೆಗೆ ಕಡಿವಾಣ ಬೀಳುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಮತ್ತಷ್ಟು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಬೆಂಗಳೂರಿನಲ್ಲಿ ಬರೋಬ್ಬರಿ 1.28 ಕೋಟಿ ವಾಹನ ನೋಂದಣಿಯಾಗಿದ್ದು, ಇನ್ನಷ್ಟು ವಾಹನಗಳ ನೋಂದಣಿ ಆಗಲಿರುವುದು ಟ್ರಾಫಿಕ್ ಬಿಸಿ ಹೆಚ್ಚಿಸಲಿದೆ.

ಬೆಂಗಳೂರು, ಡಿಸೆಂಬರ್ 11: ಬೆಂಗಳೂರು (Bangalore) ಎಂದ ತಕ್ಷಣ ನೆನಪಾಗುವುದು ಟ್ರಾಫಿಕ್. ಯಾವುದೇ ದಿಕ್ಕಿಗೆ ಹೋದರೂ ವಾಹನಗಳ ಭರಾಟೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ಹಲವು ಬಾರಿ ನಗರದ ಟ್ರಾಫಿಕ್ (Bangalore Traffic), ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ವಿಷಯವೂ ಆಗಿದೆ. ಈಗ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ನಗರದ ಟ್ರಾಫಿಕ್ ಸ್ಥಿತಿ ಇನ್ನಲ್ಲಿಗೆ ಹೋಗಿ ತಲುಪುತ್ತದೆಯೋ ಎಂಬ ಆತಂಕ ಶುರುವಾಗಿದೆ. ನಗರದಲ್ಲಿ ಕಳೆದ ಕೆಲ ತಿಂಗಳಿನಿಂದ ವಾಹನ ಖರೀದಿ ನಿಯಂತ್ರಣ ಕಳೆದಕೊಂಡಂತೆ ಕಾಣುತ್ತಿದೆ. ದಾಖಲೆ ಪ್ರಮಾಣದಲ್ಲಿ ಖಾಸಗಿ ವಾಹನಗಳು ಖರೀದಿಯಾಗುತ್ತಿವೆ.
6 ತಿಂಗಳಲ್ಲಿ 4 ಲಕ್ಷ ಖಾಸಗಿ ವಾಹನ ನೋಂದಣಿ
ಏಪ್ರಿಲ್ನಿಂದ ಅಕ್ಟೋಬರ್ ಅಂತ್ಯದ ವೇಳೆಗೆ, ಬೆಂಗಳೂರಿನಲ್ಲಿ ನಾಲ್ಕು ಲಕ್ಷದಷ್ಟು ಖಾಸಗಿ ವಾಹನಗಳು ನೊಂದಣಿಯಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಶೇ 10% ರಷ್ಟು ಏರಿಕೆ ಕಂಡಿದೆ. ಖಾಸಗಿ ವಾಹನಗಳ ಪೈಕಿ ಅತಿ ಹೆಚ್ಚು ದ್ವಿಚಕ್ರ ವಾಹನಗಳು ನೊಂದಣಿಯಾಗಿದ್ದರೆ, ಕಾರುಗಳ ನೋಂದಣಿ ಎರಡನೇ ಸ್ಥಾನದಲ್ಲಿದೆ.
ಖಾಸಗಿ ವಾಹನಗಳ ಬಳಕೆ ಹೆಚ್ಚಳ
2025ರ ಡಿಸೆಂಬರ್ ವರೆಗೆ ಬೆಂಗಳೂರಿನಲ್ಲಿ 1.28 ಕೋಟಿ ಖಾಸಗಿ ವಾಹನಗಳ ನೊಂದಣಿಯಾಗಿವೆ. ಇದನ್ನು ಹೊರತುಪಡಿಸಿ ವಾಣಿಜ್ಯ ವಾಹನಗಳು ಕೂಡ ಓಡಾಟ ಮಾಡುತ್ತಿದ್ದು, ಸಮೂಹ ಸಾರಿಗೆ ಬದಲಾಗಿ ಖಾಸಗಿ ವಾಹನಗಳ ಬಳಕೆ ನಗರದಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು 3.6ಕೋಟಿ ಖಾಸಗಿ ವಾಹನಗಳಿದ್ದರೆ, ಈ ಪೈಕಿ ಬೆಂಗಳೂರು ಒಂದರಲ್ಲೇ 1.28 ಕೋಟಿ ವಾಹನಗಳು ನೊಂದಣಿಯಾಗಿವೆ. ಇದರ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳು, ಹೊರರಾಜ್ಯದ ಹಲವು ವಾಹನಗಳು ಇಲ್ಲಿದ್ದು, ನಗರದಲ್ಲಿ 1.5 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ.
ವಾಹನ ಖರೀದಿ ಹೆಚ್ಚಳಕ್ಕೆ ಕಾರಣ ಏನು?
ಕಳೆದೆರಡು ತಿಂಗಳಿನಿಂದ ಜಿಎಸ್ಟಿ ಇಳಿಕೆ ಪರಿಣಾಮ ಪ್ರತಿದಿನ ರಾಜ್ಯದಲ್ಲಿ 5 ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ರಾಜಧಾನಿಯಲ್ಲಿ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ವಾಣಿಜ್ಯ ವಾಹನಗಳ ಬದಲಾಗಿ ಖಾಸಗಿ ವಾಹನಗಳ ಖರೀದಿ ಹೆಚ್ಚಾದರೆ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಈ ವರ್ಷ ಎಂಜಿ ರೋಡ್ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಅನುಮಾನ: ಕಾರಣ ಏನು ಗೊತ್ತಾ?
ಒಟ್ಟಿನಲ್ಲಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ದಿನಗಟ್ಟಲೇ ಟ್ರಾಫಿಕ್ನಲ್ಲಿ ಕಾಯಬೇಕಾದ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ.



