ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಗರ್ಭಿಣಿ ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಿದ ಸಿಬ್ಬಂದಿ

ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶೌಚಾಲಯದಲ್ಲಿ ಗರ್ಭಿಣಿಯೊಬ್ಬರ ವಿಡಿಯೋ ಮಾಡಲು ಸಿಬ್ಬಂದಿ ಯತ್ನಿಸಿದ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ದೂರು ದಾಖಲಾದ ನಂತರ ಸಿಬ್ಬಂದಿ ವಿರುದ್ಧ ವಾಯುರಿಸಂ (Voyeurism) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆಯೂ ಪ್ರಶ್ನೆ ಎದ್ದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಖಾಸಗಿತನ ಮತ್ತು ಸುರಕ್ಷತೆ ಕಾಪಾಡುವ ಜವಾಬ್ದಾರಿಯನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಗರ್ಭಿಣಿ ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಿದ ಸಿಬ್ಬಂದಿ
ಸಾಂದರ್ಭಿಕ ಚಿತ್ರ
Image Credit source: google gemini

Updated on: May 27, 2026 | 9:24 AM

ಬೆಂಗಳೂರು, ಮೇ.27 : ರೋಗಿಗಳ ಪ್ರಾಣ ರಕ್ಷಿಸಬೇಕಾದ ಆಸ್ಪತ್ರೆಯಲ್ಲೇ ಮಹಿಳೆಯರ ಸುರಕ್ಷತೆಗೆ ಧಕ್ಕೆ ಬಂದಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಸರ್ಜಾಪುರ ರಸ್ತೆಯಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ (Restroom) ಗರ್ಭಿಣಿಯೊಬ್ಬರ ವಿಡಿಯೋ ಚಿತ್ರೀಕರಿಸಲು ಆಸ್ಪತ್ರೆ ಸಿಬ್ಬಂದಿಯೊಬ್ಬ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ನೀಡಿರುವ 36 ವರ್ಷದ ಮಹಿಳೆಯ ಹೇಳಿರುವ ಪ್ರಕಾರ, ಮೇ 21ರಂದು ಅವರು ಸರ್ಜಾಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲಿನ ಶೌಚಾಲಯವನ್ನು ಬಳಸುತ್ತಿದ್ದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಾ ತನ್ನ ಮೊಬೈಲ್ ಫೋನ್ ಬಳಸಿ ಶೌಚಾಲಯದ ಒಳಗಿನ ದೃಶ್ಯಗಳನ್ನು ರಹಸ್ಯವಾಗಿ ವಿಡಿಯೋ ಮಾಡಲು ಯತ್ನಿಸುತ್ತಿರುವುದನ್ನು ಮಹಿಳೆ ಗಮನಿಸಿದ್ದಾರೆ.

ತಮ್ಮ ಖಾಸಗಿ ದೃಶ್ಯಗಳನ್ನು ಆತ ಕ್ಯಾಪ್ಚರ್ ಮಾಡಿರಬಹುದು ಎಂಬ ಅನುಮಾನದಿಂದ ಮಹಿಳೆ ಶೌಚಾಲಯದಿಂದ ಹೊರಬಂದು ಆತನನ್ನು ತಕ್ಷಣವೇ ಪ್ರಶ್ನಿಸಿದ್ದಾರೆ. ತಾನು ಸಿಕ್ಕಿಬಿದ್ದಿರುವುದನ್ನು ಅರಿತ ಆಸ್ಪತ್ರೆಯ ಸಿಬ್ಬಂದಿ ಸ್ಥಳದಿಂದ ತಕ್ಷಣವೇ ಕಾಲ್ಕಿತ್ತಿದ್ದಾನೆ ಎಂದು ಹೇಳಲಾಗಿದೆ. ದೂರಿನಲ್ಲಿ ಮಹಿಳೆ ತಾನು ಗರ್ಭಿಣಿಯಾಗಿದ್ದು, ಈ ಘಟನೆಯಿಂದ ತಮಗೆ ತೀವ್ರ ಮಾನಸಿಕ ಒತ್ತಡ, ಭಯ ಹಾಗೂ ಅಪಮಾನ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕೃತ್ಯ ಎಸಗಿದ ಆರೋಪಿ ಹಾಗೂ ಈ ಬಗ್ಗೆ ಸೂಕ್ತ ಸುರಕ್ಷತೆ ವಹಿಸದ ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮಹಿಳೆಯ ದೂರಿನ ಅನ್ವಯ ವರ್ತೂರು ಪೊಲೀಸರು ಆರೋಪಿ ಸಿಬ್ಬಂದಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77 (Voyeurism – ರಹಸ್ಯವಾಗಿ ವೀಕ್ಷಿಸುವುದು/ಚಿತ್ರೀಕರಿಸುವುದು), ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವುದು), ಸೆಕ್ಷನ್ 62 (ಅಪರಾಧಕ್ಕೆ ಯತ್ನ) ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಾಥಮಿಕ ತನಿಖೆಯ ವೇಳೆ ಆರೋಪಿಯ ಮೊಬೈಲ್‌ನಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ಪತ್ತೆಯಾಗಿಲ್ಲ. ಆದರೆ, ಆತ ದೃಶ್ಯಗಳನ್ನು ಡಿಲೀಟ್ ಮಾಡಿರುವ ಸಾಧ್ಯತೆ ಇರುವುದರಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಆರೋಪಿ ಹಾಗೂ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ

ಇದೇ ವರ್ಷದ ಫೆಬ್ರವರಿ ತಿಂಗಳಲ್ಲೂ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನ ಶೌಚಾಲಯದಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ಯಲಹಂಕ ಮೂಲದ ಮಹಿಳೆಯೊಬ್ಬರನ್ನು ರಹಸ್ಯವಾಗಿ ವಿಡಿಯೋ ಮಾಡಲಾಗಿತ್ತು. ನಂತರ ಅಪರಿಚಿತನೊಬ್ಬ ಇನ್‌ಸ್ಟಾಗ್ರಾಮ್ ಮೂಲಕ ಆ ವಿಡಿಯೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಈ ಪ್ರಕರಣ ಕೂಡ ಸೈಬರ್ ಕ್ರೈಮ್ ಪೊಲೀಸರ ತನಿಖೆಯಲ್ಲಿದೆ. ಆಸ್ಪತ್ರೆ ಹಾಗೂ ಕ್ರೀಡಾಂಗಣಗಳಂತಹ ಸಾರ್ವಜನಿಕ ಸ್ಥಳಗಳಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us