ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ವೇಳಾಪಟ್ಟಿಯಲ್ಲಿ ತುಸು ಬದಲಾವಣೆ: ಇಲ್ಲಿದೆ ವಿವರ
ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ಮತ್ತು ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸಂಚಾರದಲ್ಲಿ ಡಿಸೆಂಬರ್ನಿಂದ ಸಣ್ಣ ಮಾರ್ಪಾಡು ಆಗಲಿದೆ. ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲು ಸಂಚಾರ ಪ್ರತಿ ಶುಕ್ರವಾರ ಇರುವುದಿಲ್ಲ. ಅದೇ ರೀತಿ, ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಸೂಪರ್‌ಫಾಸ್ಟ್ ರೈಲನ್ನು ಎಕ್ಸ್‌ಪ್ರೆಸ್ ವರ್ಗಕ್ಕೆ ಬದಲಾಯಿಸಲಾಗುತ್ತದೆ.

ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ (Hyderabad-Bengaluru Vande Bharat Express) ವೇಳಾಪಟ್ಟಿಯಲ್ಲಿ ಭಾರತೀಯ ರೈಲ್ವೆ (Indian Railway) ತುಸು ಬದಲಾವಣೆ ಮಾಡಿದೆ. ಕಾಚೆಗುಡ-ಯಶವಂತಪುರ-ಕಾಚೆಗುಡ ವಂದೇ ಭಾರತ್ (Kacheguda–Yesvantpur Vande Bharat) ಎಕ್ಸ್‌ಪ್ರೆಸ್ (20703/20704) ಡಿಸೆಂಬರ್ 4 ರಿಂದ ಪರಿಷ್ಕರಣೆಗೊಳ್ಳಲಿರುವ ವೇಳಾಪಟ್ಟಿಯಂತೆ ಪ್ರತಿ ಶುಕ್ರವಾರಗಳಂದು ಸಂಚರಿವುಸುದಿಲ್ಲ. ಈ ರೈಲು ಪ್ರಸ್ತುತ ಬುಧವಾರಗಳಂದು ಸಂಚರಿಸುತ್ತಿಲ್ಲ. ಆದರೆ, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪ್ರತಿ ಬುಧವಾರವೂ ಸಂಚರಿಸಲಿದೆ. ಅಂದರೆ, ಶುಕ್ರವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿಯೂ ಸಂಚರಿಸಲಿವೆ. ಉಳಿದಂತೆ ಪ್ರಯಾಣದ ಸಮಯ, ನಿಲುಗಡೆಗಳು, ಟ್ರಿಪ್ ಈಗಿನಂತೆಯೇ ಮುಂದುವರಿಯಲಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲಿನ ಪರಿಷ್ಕೃತ ವೇಳಾಪಟ್ಟಿ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಅದೇ ರೀತಿ, ಸಿಕಂದರಾಬಾದ್-ವಿಶಾಖಪಟ್ಟಣ ಮಾರ್ಗದಲ್ಲಿ, ಸೋಮವಾರ ಹೊರತುಪಡಿಸಿ ಪ್ರತಿ ದಿನವೂ ಸೇವೆಗಳು ಕಾರ್ಯನಿರ್ವಹಿಸಲಿವೆ. ಇದು ಡಿಸೆಂಬರ್ 5 ರಿಂದ ಜಾರಿಗೆ ಬರುತ್ತದೆ ಎಂದು ಸೌತ್ ಸೆಂಟ್ರಲ್ ರೈಲ್ವೆ ತಿಳಿಸಿದೆ.
ಸುಗಮ ಕಾರ್ಯಾಚರಣೆ ಮತ್ತು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಎರ್ನಾಕುಲಂ ರೈಲ ಸಂಚಾರ ಅಪ್ಡೇಟ್
Kindly note: I. Change in Train Category & Numbers II. Change in Day of Services of Vande Bharat Express I. ರೈಲಿನ ವರ್ಗ ಮತ್ತು ಸಂಖ್ಯೆಗಳಲ್ಲಿ ಬದಲಾವಣೆ II. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವಾ ದಿನಗಳಲ್ಲಿ ಬದಲಾವಣೆ#SWRupdates pic.twitter.com/BGa1saoDHJ
— South Western Railway (@SWRRLY) September 17, 2025
ಡಿಸೆಂಬರ್ 3 ರಿಂದ ಜಾರಿಗೆ ಬರುವಂತೆ ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12678/12677) ಅನ್ನು ಸೂಪರ್‌ಫಾಸ್ಟ್ ವರ್ಗದಿಂದ ಎಕ್ಸ್‌ಪ್ರೆಸ್ ವರ್ಗಕ್ಕೆ ಬದಲಾಯಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 12678 ಎರ್ನಾಕುಲಂ – ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಸೆಂಬರ್ 3 ರ ನಂತರ 16378 ಎರ್ನಾಕುಲಂ – ಬೆಂಗಳೂರು ಎಕ್ಸ್‌ಪ್ರೆಸ್ ಆಗಿ ಚಲಿಸಲಿದೆ.
ಇದನ್ನೂ ಓದಿ: ದಸರಾ ಪ್ರಯುಕ್ತ ಕರ್ನಾಟಕದ ವಿವಿಧೆಡೆಗೆ ವಿಶೇಷ ರೈಲುಗಳು: ಟ್ರಿಪ್ ವಿವರ, ವೇಳಾಪಟ್ಟಿ ಇಲ್ಲಿದೆ
ಅದೇ ರೀತಿ, ರೈಲು ಸಂಖ್ಯೆ 12677 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು 16377 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಗುತ್ತದೆ.




