ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ: ಎಫ್‌ಎಸ್‌ಎಸ್‌ಎಐ ನಿಯಮ ಮೀರಿದ ಇಂದಿರಾ ಕ್ಯಾಂಟೀನ್ ಘಟಕಗಳಿಗೆ ನೋಟಿಸ್

ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಮೂರು ಕೇಂದ್ರ ಅಡುಗೆ ಘಟಕಗಳ ಮೇಲೆ FSSAI ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ, ಕಳಪೆ ಲೇಬಲಿಂಗ್ ಮತ್ತು ಅಶುಚಿತ್ವ ಕಂಡುಬಂದಿದೆ. ಗೊಟ್ಟಿಗೆರೆ ಕ್ಯಾಂಟೀನ್ ಗೋಡೌನ್ ಸೀಲ್ ಮಾಡಲಾಗಿದ್ದು, ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ ಆಹಾರ ಖಚಿತಪಡಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.

ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟ: ಎಫ್‌ಎಸ್‌ಎಸ್‌ಎಐ ನಿಯಮ ಮೀರಿದ ಇಂದಿರಾ ಕ್ಯಾಂಟೀನ್ ಘಟಕಗಳಿಗೆ ನೋಟಿಸ್
ಇಂದಿರಾ ಕ್ಯಾಂಟೀನ್ ಬೆಂಗಳೂರು
Edited By:

Updated on: Aug 11, 2026 | 7:15 PM

ಬೆಂಗಳೂರು, ಆ.11: ಬೆಂಗಳೂರಿನ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶ ಹೊಂದಿರುವ ಇಂದಿರಾ ಕ್ಯಾಂಟೀನ್‌ಗಳ ಅಡುಗೆ ಮನೆಗಳ ಮೇಲೆ ಇದೀಗ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಕಠಿಣ ನಿಗಾ ವಹಿಸಿದ್ದಾರೆ. ಇಂದು ಬೆಳಿಗ್ಗೆ ನಗರದ ಪ್ರಮುಖ ಮೂರು ಕೇಂದ್ರ ಅಡುಗೆ ಘಟಕಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಆಹಾರ ಸುರಕ್ಷತಾ ನಿಯಮಗಳ ಭಾರೀ ಉಲ್ಲಂಘನೆಯನ್ನು ಪತ್ತೆ ಹಚ್ಚಿದ್ದಾರೆ. ಆಹಾರ ಇಲಾಖೆಯ ತಪಾಸಣಾ ತಂಡವು ಬೆಂಗಳೂರಿನ ಗೊಟ್ಟಿಗೆರೆ, ಲಿಂಗರಾಜಪುರ ಮತ್ತು ಸಿಂಗಸಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ಕೇಂದ್ರ ಅಡುಗೆ ಘಟಕಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್​​ನಲ್ಲಿ ಪರಿಶೀಲನೆ ವೇಳೆ ಹೆಗ್ಗಣ ಮತ್ತು ಇಲಿಗಳು ಕಂಡುಬಂದ ಪರಿಣಾಮ ಕ್ಯಾಂಟೀನ್​​ ಸೀಜ್​ ಮಾಡಲಾಗಿತ್ತು. ಇದೀಗ ಈ ಲೋಪಕ್ಕೆ ಸಂಬಂಧಿಸಿದಂತೆ ಇಂದಿರಾ ಕ್ಯಾಂಟೀನ್‌ ಅಧಿಕಾರಿಗಳಿಗೆ ನೋಟಿಸ್​​​​​ ನೀಡಲಾಗಿದೆ.

ಬಳಸುವ ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಆಹಾರ ಪದಾರ್ಥಗಳ ಮಿಸ್‌ಬ್ರಾಂಡಿಂಗ್ ಮತ್ತು ಎಫ್‌ಎಸ್‌ಎಸ್‌ಎಐ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅಡುಗೆ ಘಟಕಗಳಲ್ಲಿ ಆಹಾರ ನಿರ್ವಹಣೆ ಅತ್ಯಂತ ಅಶುಚಿಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದೀಗ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಶುಚಿತ್ವ ಮತ್ತು ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಗೊಟ್ಟಿಗೆರೆ ಇಂದಿರಾ ಕ್ಯಾಂಟೀನ್ ಅಡುಗೆ ಘಟಕದ ಗೋದಾಮಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ. ಮೂರು ಅಡುಗೆ ಘಟಕಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ನ್ಯಾಯ ನಿರ್ಣಾಯಾಧಿಕಾರಿ ಮುಂದೆ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು!

ಮಾದರಿ ಪರೀಕ್ಷೆ:

ದಾಳಿ ವೇಳೆ ಬೇಳೆ, ಅರಿಶಿನ ಪುಡಿ, ಎಣ್ಣೆ, ಉಪ್ಪು ಮತ್ತು ಸಕ್ಕರೆಯಂತಹ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿಯಲ್ಲಿ ಗುಣಮಟ್ಟ ಕಳಪೆಯಾಗಿರುವುದು ಕಂಡುಬಂದಲ್ಲಿ, ಆಹಾರ ಉದ್ದಿಮೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ಸುರಕ್ಷಿತ, ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರ ಸಿಗುವಂತೆ ಮಾಡಲು ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us