‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಬೆಂಗಳೂರಿನಲ್ಲಿ ಪ್ರಿಯತಮೆಯೊಬ್ಬಳು 'ಫಾರಿನ್ ಸ್ಟೈಲ್' ಪ್ರಪೋಸ್ ಮಾಡುವ ನೆಪದಲ್ಲಿ ತನ್ನ ಪ್ರಿಯಕರನ ಕೈ-ಕಾಲು ಕಟ್ಟಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾಳೆ. ಕಿರಣ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೀತಿ ಹೆಸರಲ್ಲಿ ನಡೆದ ಈ ಘಟನೆ ತೀವ್ರ ಆಘಾತ ಮೂಡಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.

ಫಾರಿನ್ ಸ್ಟೈಲ್ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ
Edited By:

Updated on: Apr 21, 2026 | 6:24 PM

ಬೆಂಗಳೂರು, ಏ.21 : ರಾಜ್ಯದಲ್ಲಿ ಪ್ರೀತಿ-ಪ್ರೇಮಗಳಿಂದ ಉಂಟಾಗುವ ಅವಾಂತರಗಳು ಒಂದೆರಡಲ್ಲ, ಸಂಬಂಧಗಳ ನಡುವೆ ನಂಬಿಕೆಗಳು ಇಲ್ಲದಾಗ ಇಂತಹ ಘಟನೆಗಳು ಇದೆ. ಪ್ರೀತಿಗಾಗಿ ಗಂಡನನ್ನು ಕೊಲೆ ಮಾಡುವುದು, ಪ್ರೀತಿಸಿದವರು ಸಿಕ್ಕಿಲ್ಲ ಎಂದು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಹೆಚ್ಚಾಗಿದೆ. ಪ್ರೀತಿ, ಪ್ರಪೋಸ್ ಮತ್ತು ಕ್ರೌರ್ಯದ ಪರಾಕಾಷ್ಠೆ ಎಂಬಂತ ಘಟನೆಯೊಂದು ಸಿಲಿಕಾನ್ ಸಿಟಿಯ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ‘ವೆಸ್ಟರ್ನ್ ಸ್ಟೈಲ್’ನಲ್ಲಿ ನಿನಗೆ ಪ್ರಪೋಸ್ ಮಾಡ್ತೀನಿ ಎಂದು ನಂಬಿಸಿ, ಪ್ರಿಯಕರನ ಕೈ-ಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಆರೋಪ ಪ್ರಿಯತಮೆಯ ಮೇಲೆ ಕೇಳಿಬಂದಿದೆ.

ಮೃತ ಕಿರಣ್ ಮತ್ತು ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದಿದ್ದನ್ನು ನೋಡಿ ಕಿರಣ್ ಆಕೆಯ ಮನೆಗೆ ಬಂದಿದ್ದನು. ಈ ವೇಳೆ ಯುವತಿ ನಡೆಸಿದ ಕುಕೃತ್ಯಗಳು ಮೈ ನಡುಗಿಸುವಂತಿವೆ. “ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ” ಎಂದು ಹೇಳಿದ ಯುವತಿ, ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್ “ಯಾಕೆ ಇಷ್ಟು ಟೈಟ್ ಆಗಿ ಕಟ್ತಿದ್ದೀಯಾ?” ಎಂದು ಕೇಳಿದಾಗ, “ಇದು ಫಾರಿನ್ ಸ್ಟೈಲ್, ಸುಮ್ಮನಿರು” ಎಂದು ನಂಬಿಸಿದ್ದಾಳೆ.

ಕಿರಣ್ ಸಂಪೂರ್ಣ ಅಸಹಾಯಕನಾದ ಮೇಲೆ ಆಕೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಕೃತ್ಯ ನಡೆಯುವ ದೃಶ್ಯವನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಯುವತಿ, “ನಾನು ಟಾಯ್ಲೆಟ್‌ನಲ್ಲಿದ್ದೆ, ಆಗ ಸೌಂಡ್ ಬಂತು. ಹೊರಬಂದು ನೋಡಿದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ” ಎಂದು ಕಥೆ ಕಟ್ಟಿದ್ದಳು. ಆದರೆ ಕಿರಣ್ ಬೈಕ್‌ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರಿಂದಾಗಿ ಪೆಟ್ರೋಲ್ ಅನ್ನು ಯುವತಿಯೇ ಮೊದಲೇ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ

ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರೀತಿಯ ಹೆಸರಲ್ಲಿ ಇಷ್ಟೊಂದು ಭೀಕರ ಕೃತ್ಯ ಎಸಗಲು ಕಾರಣವೇನು? ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Tue, 21 April 26

Follow Us