AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಕೊಂದು ರಾಜಕಾಲುವೆಗೆ ಎಸೆದ ಪತಿ: 9 ದಿನಗಳ ಬಳಿಕ ಪ್ರಕರಣ ಬಯಲು

ಬೆಂಗಳೂರಿನ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ರಾಜಕಾಲುವೆಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ ಕೊನೆಗೂ ಬಯಲಾಗಿದೆ. 9 ದಿನಗಳ ಸತತ ಯತ್ನದ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯನ್ನು, ಅಕ್ರಮ ಸಂಬಂಧದ ಅನುಮಾನದಿಂದ ಆಕೆಯ ಪತಿಯೇ ಅಕ್ಟೋಬರ್ 10ರಂದು ಕೊಲೆ ಮಾಡಿ ರಾಜಕಾಲುವೆಗೆ ಎಸೆದಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಕೊಂದು ರಾಜಕಾಲುವೆಗೆ ಎಸೆದ ಪತಿ: 9 ದಿನಗಳ ಬಳಿಕ ಪ್ರಕರಣ ಬಯಲು
ರುಕ್ಸಾನಾ ಹಾಗೂ ಆರೋಪಿ ಮೊಹಮ್ಮದ್ ಇರ್ಫಾಜ್
ವಿಕಾಸ್​ ಬಿಎಂ
| Edited By: |

Updated on: Oct 22, 2026 | 12:53 PM

Share

ಮುಖ್ಯಾಂಶಗಳು

  • ಅಕ್ರಮ ಸಂಬಂಧದ ಅನುಮಾನಕ್ಕೆ ಪತ್ನಿಯನ್ನೇ ಕೊಂದ ಪತಿ
  • ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹ
  • ಹತ್ತಕ್ಕೂ ಹೆಚ್ಚು ತಂಡಗಳಿಂದ ತನಿಖೆ ನಡೆಸಿದ್ದ ಪೊಲೀಸರು

ಬೆಂಗಳೂರು, ಅಕ್ಟೋಬರ್ 22: ಬೆಂಗಳೂರಿನ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ರಾಜಕಾಲುವೆಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ರುಕ್ಸಾನಾ (25) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತಿ ಮೊಹಮ್ಮದ್ ಇರ್ಫಾಜ್ ಆಕೆಯನ್ನು ಕೊಲೆ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಕ್ಟೋಬರ್ 13ರಂದು ರಾಜಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದೀಗ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆಂದು ಪತ್ನಿಯ ಮೇಲೆ ಅನುಮಾನ

ರುಕ್ಸಾನಾ ಮತ್ತು ಮೊಹಮ್ಮದ್ ಇರ್ಫಾಜ್ ಇಬ್ಬರೂ ಬಿಹಾರ ಮೂಲದವರು. ಸುಮಾರು ಒಂದು ವರ್ಷದ ಹಿಂದೆ ಇವರ ವಿವಾಹವಾಗಿತ್ತು. ರುಕ್ಸಾನಾಗೆ ಈ ಹಿಂದೆ ಮದುವೆಯಾಗಿದ್ದು, ಒಂದು ಮಗುವೂ ಇತ್ತು. ಮೊದಲ ಪತಿಯಿಂದ ದೂರವಾಗಿದ್ದ ಆಕೆ, ಬಿಹಾರದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಇರ್ಫಾಜ್‌ನ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.

ಸುಮಾರು ಆರು ತಿಂಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ಬಂದಿದ್ದರು. ಇರ್ಫಾಜ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ರುಕ್ಸಾನಾ ಕೂಡ ಕೆಲಸ ಮಾಡುತ್ತಿದ್ದಳು. ಆದರೆ, ಪತ್ನಿ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಕಂಡು ಆಕೆಗೆ ಅಕ್ರಮ ಸಂಬಂಧವಿದೆ ಎಂದು ಇರ್ಫಾಜ್ ಅನುಮಾನಪಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಅಕ್ಟೋಬರ್ 10ರಂದು ಕೊಲೆ ಮಾಡಿದ್ದ ಆರೋಪಿ

ಅಕ್ಟೋಬರ್ 10ರಂದು ದಂಪತಿ ನಡುವೆ ಜಗಳ ತೀವ್ರಗೊಂಡಿತ್ತು. ಈ ವೇಳೆ ಇರ್ಫಾಜ್ ಕಲ್ಲನ್ನು ಎತ್ತಿ ಪತ್ನಿಯ ತಲೆಗೆ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಬಾಯಿಗೆ ವೇಲ್ ತುರುಕಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹವನ್ನು ಸಾಗಿಸಲು ಅಪರಿಚಿತ ವ್ಯಕ್ತಿಯೊಬ್ಬರ ಬೈಕ್‌ನ ಹ್ಯಾಂಡ್‌ಲಾಕ್ ಮುರಿದು ಬಳಸಿಕೊಂಡಿದ್ದಾನೆ. ಮೃತದೇಹವನ್ನು ಚೀಲದಲ್ಲಿ ಇರಿಸಿ, ಬೈಕ್‌ನ ಮಧ್ಯಭಾಗದಲ್ಲಿ ಇಟ್ಟುಕೊಂಡು ತಳ್ಳಿಕೊಂಡು ಹೋಗಿದ್ದ ಆರೋಪಿ, ಬಳಿಕ ರಾಜಕಾಲುವೆಗೆ ಎಸೆದು ಬಂದಿದ್ದ ಎಂದು ತಿಳಿದುಬಂದಿದೆ.

9 ದಿನಗಳ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

ಅಕ್ಟೋಬರ್ 13ರಂದು ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಕಾಲುವೆಯಲ್ಲಿ ಮಹಿಳೆಯ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು. ಆದರೆ, ಆರಂಭದಲ್ಲಿ ಮಹಿಳೆಯ ಗುರುತು ಹಾಗೂ ಕೊಲೆಗೆ ಸಂಬಂಧಿಸಿದ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹತ್ತಕ್ಕೂ ಹೆಚ್ಚು ತಂಡಗಳನ್ನು ರಚಿಸಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಕಾಣೆಯಾಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನೂ ಕೈಗೊಂಡಿದ್ದರು. ಈ ವೇಳೆ ಗೋಪಾಲಪುರದ ವ್ಯಕ್ತಿಯೊಬ್ಬನ ಪತ್ನೆ ಕಾಣೆಯಾಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭಿಸಿತ್ತು.

ಪತ್ನಿ ಬಿಹಾರಕ್ಕೆ ಹೋಗಿದ್ದಾಳೆ ಎಂದಿದ್ದ ಮೊಹಮ್ಮದ್ ಇರ್ಫಾಜ್‌

ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಮೊಹಮ್ಮದ್ ಇರ್ಫಾಜ್‌ನನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಬಿಹಾರದಲ್ಲಿರುವ ತನ್ನ ಊರಿಗೆ ಹೋಗಿದ್ದಾಳೆ, ಆಕೆ ಮೊಬೈಲ್ ಬಳಸುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದ. ಆತನ ಹೇಳಿಕೆಗಳ ಬಗ್ಗೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮಾಗಡಿ ರಸ್ತೆ ಪೊಲೀಸರು ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More