Bengaluru: ನಕಲಿ ಬಿಲ್ ಸೃಷ್ಟಿಸಿ ಸಿಎಂ ಪರಿಹಾರ ನಿಧಿ ಪಡೆಯುತ್ತಿದ್ದ ಆರೋಪಿ ಅಂದರ್
ಮುಖ್ಯಮಂತ್ರಿ ಪರಿಹಾರ ನಿಧಿಗೆ ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ಹೆಸರಿನಲ್ಲಿ ನಕಲಿ ಆಸ್ಪತ್ರೆ ಬಿಲ್‌ಗಳನ್ನು ಸೃಷ್ಟಿಸಿ, ಪರಿಹಾರ ಹಣ ಪಡೆದು ಕಮಿಷನ್ ಪಡೆಯುತ್ತಿದ್ದ. ಈತ ಮಾತ್ರವಲ್ಲದೆ ಒಟ್ಟು ಐದು ಜನ ಈ ಕೆಲಸದಲ್ಲಿ ನಿರತರಾಗಿದ್ದರು. ಆ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರು, ನವೆಂಬರ್ 11:ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಡೆಯುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ನೆಲಮಂಗಲದ ಧನಂಜಯ (59) ಬಂಧಿತ ಆರೋಪಿಯಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೀಡಲಾಗುವ ಆರ್ಥಿಕ ಸಹಾಯ ಪಡೆಯಲು ನಕಲಿ ಆಸ್ಪತ್ರೆ ಬಿಲ್‌ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಈತ ಸಲ್ಲಿಸುತ್ತಿದ್ದ ಎಂಬುದು ಗೊತ್ತಾಗಿದೆ.
ಶಿಕ್ಷಕ ತರಬೇತಿ ಕೋರ್ಸ್ (Teacher Training Course) ಪೂರ್ಣಗೊಳಿಸಿದ್ದ ಆರೋಪಿ ಧನಂಜಯ ಯಶವಂತಪುರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸುತ್ತಿದ್ದ. ಅವರ ಮಾಹಿತಿಯನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮುಖ್ಯಮಂತ್ರಿ ಕಚೇರಿಗೆ ಅವುಗಳನ್ನು ಸಲ್ಲಿಸಿ ಪರಿಹಾರ ಹಣ ಪಡೆಯುತ್ತಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಧನಂಜಯ ಒಬ್ಬನೇ ಕೆಲಸ ಮಾಡುತ್ತಿರಲಿಲ್ಲ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬ ನಾಲ್ವರೂ ಈ ರೀತಿಯ ಕೆಲಸದಲ್ಲಿ ತೊಡಗಿದ್ದರು. ಇವರಲ್ಲಿ ಕ್ಯಾತಣ್ಣ ಮತ್ತು ಮತ್ತೊಬ್ಬ ಆರೋಪಿಯು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಹೋಗಿ ಬಲಿಯಾದ ತಾಯಿ
ಅರ್ಜಿಗಳಲ್ಲಿನ ಕೆಲ ಲೋಪಗಳನ್ನು ಮುಖ್ಯಮಂತ್ರಿ ಕಾರ್ಯಾಲಯದ (CMO) ಅಧಿಕಾರಿಗಳು ಈ ವರ್ಷದ ಮೇ ತಿಂಗಳಲ್ಲಿ ಗುರುತಿಸಿದ್ದರಾದರೂ ಅದರ ಮೂಲವನ್ನು ಪತ್ತೆ ಮಾಡಲು ಆಗಿರಲಿಲ್ಲ. ಆದರೆ, ನವೆಂಬರ್ 5ರಂದು ವಿಧಾನದ ಸೌಧದ ಎರಡನೇ ಮಹಡಿಯಲ್ಲಿರುವ ಮುಖ್ಯಮಂತ್ರಿಯ ಕಚೇರಿಗೆ ಬಂದ ಧನಂಜಯ, ನಕಲಿ ಅರ್ಜಿಗಳಲ್ಲಿ ಒಂದರ ಪಾವತಿ ವಿಳಂಬದ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಆತನ ಪ್ರಶ್ನೆಗಳಿಂದ ಅನುಮಾನಗೊಂಡ ಅಧಿಕಾರಿಗಳು ವಿಧಾನದ ಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಹಲವು ಜನರಿಂದ ಅವರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಇತರೆ ವೈಯಕ್ತಿಕ ಮಾಹಿತಿಯನ್ನು ಆರೋಪಿ ಧನಂಜಯ ಸಂಗ್ರಹಿಸುತ್ತಿದ್ದ. ಅವರಿಗೆ ಪರಿಹಾರ ನಿಧಿ ಸಿಗುವಂತೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದ. ಹಣ ಬಿಡುಗಡೆಯಾದ ನಂತರ ಪ್ರತಿಯೊಬ್ಬರಿಂದ 50 ಸಾವಿರ ರೂ. ಕಮಿಷನ್ ಕೇಳುತ್ತಿದ್ದ. ಈ ಮೂಲಕ ಸಂಗ್ರಹಿಸಿದ ಹಣವನ್ನು ತನ್ನ ವೈಯಕ್ತಿಕ ಖರ್ಚುಗಳಿಗೆ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




