ಮೆಟ್ರೋ ಮಾರ್ಗ ಉದ್ಘಾಟನೆ ವೇಳೆ ಇಂಗ್ಲಿಷ್ ಬ್ಯಾನರ್ ಬಳಕೆ; ಕ್ಷಮೆ ಕೋರಿ, ವಿಷಾದ ವ್ಯಕ್ತಪಡಿಸಿದ ಮೆಟ್ರೋ ನಿಗಮ

Bengaluru Metro: ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಲೋಕಾರ್ಪಣೆ ವೇಳೆ ಇಂಗ್ಲೀಷ್ ಬ್ಯಾನರ್ ಬಳಕೆ ಮಾಡಲಾಗಿತ್ತು. ಈ ಸಂಬಂಧ, ಮೆಟ್ರೋ ನಿಗಮ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳಿದೆ. ಘಟನೆಯ ಸಂಪೂರ್ಣ ಹೊಣೆ ಹೊತ್ತು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಕ್ಷಮೆ ಕೇಳಿದ್ದಾರೆ.

ಮೆಟ್ರೋ ಮಾರ್ಗ ಉದ್ಘಾಟನೆ ವೇಳೆ ಇಂಗ್ಲಿಷ್ ಬ್ಯಾನರ್ ಬಳಕೆ; ಕ್ಷಮೆ ಕೋರಿ, ವಿಷಾದ ವ್ಯಕ್ತಪಡಿಸಿದ ಮೆಟ್ರೋ ನಿಗಮ
ಬೆಂಗಳೂರು ಮೆಟ್ರೋ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Aug 30, 2021 | 4:25 PM

ಬೆಂಗಳೂರು: ಮೆಟ್ರೋ ಮಾರ್ಗ ಉದ್ಘಾಟನೆ ವೇಳೆ ಇಂಗ್ಲಿಷ್ ಬ್ಯಾನರ್ ಅಳವಡಿಸಿರುವ ವಿಚಾರಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನುಮುಂದೆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಲೋಕಾರ್ಪಣೆ ವೇಳೆ ಇಂಗ್ಲೀಷ್ ಬ್ಯಾನರ್ ಬಳಕೆ ಮಾಡಲಾಗಿತ್ತು. ಈ ಸಂಬಂಧ, ಮೆಟ್ರೋ ನಿಗಮ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳಿದೆ. ಘಟನೆಯ ಸಂಪೂರ್ಣ ಹೊಣೆ ಹೊತ್ತು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಕ್ಷಮೆ ಕೇಳಿದ್ದಾರೆ.

ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ (ಆಗಸ್ಟ್ 29) ಚಾಲನೆ ನೀಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಆರ್ ಅಶೋಕ್, ವಿ.ಸೋಮಣ್ಣ, ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. 7.5 ಕಿ.ಮೀ. ಉದ್ದದ ಮೆಟ್ರೋ ವಿಸ್ತರಿತ ಮಾರ್ಗ ಲೋಕಾರ್ಪಣೆ ಮಾಡಿದ ನಂತರ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ನಾಯಂಡಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಹೊರಟು ಕೆಂಗೇರಿಗೆ ತಲುಪಿದ ಮೊದಲ ರೈಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸಚಿವರು ಪ್ರಯಾಣಿಸಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೂತನ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ್ದು, ಮೊದಲ ರೈಲಿನಲ್ಲಿ ಮೆಟ್ರೋ ಸಿಬ್ಬಂದಿ ಪ್ರಯಾಣ ನಡೆಸಿದ್ದರು. ವಿಶೇಷವೆಂದರೆ ಮಹಿಳಾ ಲೋಕೋ ಪೈಲಟ್​ನಿಂದ ಮೆಟ್ರೋಗೆ ಚಾಲನೆ ಸಿಕ್ಕಿತ್ತು.

ಉದ್ಘಾಟನೆಯಾದ ಈ ಮಾರ್ಗ ಸೋಮವಾರ (ಆಗಸ್ಟ್ 30) ಬೆಳಗ್ಗೆ 7 ರಿಂದ ಜನರ ಸೇವೆಗೆ ಅಧಿಕೃತವಾಗಿ ಲಭ್ಯವಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಿರುವ ಕಾರಣ ಪ್ರಯಾಣಿಕ ಬಳಕೆಗೆ ಮಾರ್ಗವನ್ನು ಅನುವು ಮಾಡಿಕೊಡಲಾಗಿದೆ. ಒಟ್ಟು 7.53 ಕಿ.ಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಎಂಆರ್​ಸಿಎಲ್ ಕಳೆದ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಿದೆ.

ನಾಯಂಡಹಳ್ಳಿ- ಕೆಂಗೇರಿ ಮೆಟ್ರೋ ರೈಲು ಸಂಚಾರ ಸೇವೆಯು ಹತ್ತು ನಿಮಿಷಗಳಿಗೆ ಒಂದು ರೈಲು ಕಾರ್ಯಚರಿಸಲು ಮೆಟ್ರೋ ನಿಗಮ ನಿರ್ಧರಿಸಿತ್ತು. ಆದರೆ ಈಗ ಪ್ರಯಾಣಿಕರ ದಟ್ಟಣೆ ನೋಡಿ ರೈಲು ಸಂಚಾರ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಇದನ್ನೂ ಓದಿ: Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್​​ ಮೂಲಕ ನೂತನ ಮಾರ್ಗಕ್ಕೆ ಚಾಲನೆ

ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ವಿಸ್ತರಿಸುವ ಚಿಂತನೆ ಇದೆ; ಸಿಎಂ ಬಸವರಾಜ ಬೊಮ್ಮಾಯಿ