ಬೆಂಗಳೂರು: ಏಕಾಏಕಿ ಶಾಪ್ಗೆ ನುಗ್ಗಿ 2 ಕೋಟಿ ರೂ ದೋಚಿದ ದುಷ್ಕರ್ಮಿಗಳು
ಬೆಂಗಳೂರಿನ ವಿದ್ಯಾರಣ್ಯಪುರಂನಲ್ಲಿ ಹಾಡಹಗಲೇ 2 ಕೋಟಿ ರೂ ಹಣ ದರೋಡೆ ಮಾಡಿರುವಂತಹ ಘಟನೆ ನಡೆದಿದೆ. ಕೆಂಗೇರಿ ನಿವಾಸಿ ವ್ಯಕ್ತಿ USDT ಗೆ ಹಣವನ್ನು ಪರಿವರ್ತಿಸಲು ಬಂದಾಗ ಈ ಘಟನೆ ನಡೆದಿದೆ. ಆರೋಪಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಸದ್ಯ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರು, ಜೂನ್ 27: ನಗರದಲ್ಲಿ ಹಾಡಹಗಲೇ 2 ಕೋಟಿ ರೂ ಹಣ ದರೋಡೆ (robbery) ಮಾಡಿರುವಂತಹ ಘಟನೆ ಜೂನ್ 25ರಂದು ವಿದ್ಯಾರಣ್ಯಪುರಂನ ಎಂ.ಎಸ್.ಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುಎಸ್ಡಿಟಿ (USDT)ಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ದರೋಡೆ ಮಾಡಲಾಗಿದೆ. ಕೆಂಗೇರಿ ನಿವಾಸಿ ಶ್ರೀಹರ್ಷ 2 ಕೋಟಿ ರೂ. ಹಣ ಕಳೆದುಕೊಂಡವರು. ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದರೋಡೆ ನಡೆಸಿದ ಗ್ಯಾಂಗ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್ನಿಂದ ಯಂತ್ರ ಬೇಕಾಗಿರುತ್ತೆ. ಹೀಗಾಗಿ USDTಗೆ ಹಣ ಕನ್ವರ್ಟ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಎಂಬಾತ ಪರಿಚಯ ಆಗಿದ್ದ. ಜೂ.25ರ ಮಧ್ಯಾಹ್ನ 3 ಗಂಟೆಗೆ ಎಕೆ ಎಂಟರ್ಪ್ರೈಸ್ ಶಾಪ್‌ನಲ್ಲಿ ಶ್ರೀಹರ್ಷ ಮತ್ತು ಬೆಂಜಮಿನ್ ಭೇಟಿಯಾಗಿದ್ದರು.
ಇದನ್ನೂ ಓದಿ: ಕೊಪ್ಪಳ: ಮೂರನೇ ಪತ್ನಿಯ ಕೊಲೆ ಮಾಡಿ ಬಸ್ನಲ್ಲಿ ಲಗೇಜ್ ಎಂದು ಕಳುಹಿಸಿ ಪರಾರಿಯಾಗಿದ್ದ ವೃದ್ಧ 23 ವರ್ಷಗಳ ಬಳಿಕ ಅರೆಸ್ಟ್
ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು. ಇದೇ ವೇಳೆ 6-7 ಅಪರಿಚಿತರ ಗುಂಪು ಏಕಾಏಕಿ ಶಾಪ್ಗೆ ನುಗ್ಗಿದೆ. ಶ್ರೀಹರ್ಷ ಮೇಲೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ 2 ಕೋಟಿ ರೂ ಹಣ ಚೀಲದಲ್ಲಿ ತುಂಬಿಕೊಂಡು ಅವರನ್ನು ಕೂಡಿ ಹಾಕಿ ಪರಾರಿ ಆಗಿದ್ದಾರೆ.
ಶಾಪ್ನಿಂದ ಹೊರಬಂದಾಗ ಬೆಂಜಮಿನ್ ಮತ್ತು ಸ್ನೇಹಿತರು ಕೂಡ ಪರಾರಿ ಆಗಿದ್ದು, ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಬೆಂಜಮಿನ್ ಮತ್ತು ಇತರರ ವಿರುದ್ಧ ಶ್ರೀಹರ್ಷ ದೂರು ನೀಡಿದ್ದಾರೆ. ಸದ್ಯ ಬೆಂಜಮಿನ್ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚಾದ ಬೈಕ್ ಪೆಟ್ರೋಲ್ ಕಳ್ಳತನ
ಬೆಂಗಳೂರಿನಲ್ಲಿ ಬೈಕ್ ಪೆಟ್ರೋಲ್ ಕಳ್ಳತನ ಹೆಚ್ಚಾಗಿದೆ. ಇಂದಿರನಗರದ ಹೆಚ್ಎಎಲ್ 2ನೇ ಹಂತದಲ್ಲಿ ಬೆಳಗಿನ ಜಾವ 4 ಗಂಟೆಗೆ ಖದೀಮರು ಪೆಟ್ರೋಲ್ ಕದಿದ್ದಾರೆ. ಬಾಟಲಿಯಿಂದ ಬೈಕ್ನ ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಇದನ್ನೂ ಓದಿ: ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ
ವಿಡಿಯೋದಲ್ಲಿ ಎಂಟ್ರಿ ಕೊಡುವ ಇಬ್ಬರು ವ್ಯಕ್ತಿಗಳು ಅಕ್ಕ-ಪಕ್ಕ ಯಾರಾದರೂ ಇದ್ದಾರಾ ಗಮನಿಸ್ತಾರೆ. ಒಬ್ಬ ಇಳಿದು ಯಾವ ಬೈಕ್‌ನಲ್ಲಿ ಪೆಟ್ರೋಲ್ ಕದಿಯಬಹುದು ಅಂತ ನೋಡ್ತಾನೆ. ಬೈಕ್ ಗುರುತಿಸಿ ಪೈಪ್ ಕಟ್ ಮಾಡಿ ಬಾಟಲ್ ಇಟ್ಟು ಅಲ್ಲಿಂದ ಹೋಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಬಾಟಲ್ ತುಂಬಿದ ನಂತರ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:39 pm, Fri, 27 June 25








