ಬೆಂಗಳೂರು ಏರ್ಪೋರ್ಟ್ನಲ್ಲಿ ತೆಂಗಿನಕಾಯಿಯಿದ್ದ ಸೂಟ್ಕೇಸ್ ವಶಕ್ಕೆ; ಮದುವೆಗೆ ಹೊರಟಿದ್ದ ಪ್ರಯಾಣಿಕರಿಗೆ ಶಾಕ್
ತೆಂಗಿನಕಾಯಿ ಇರುವ ಸೂಟ್ಕೇಸನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ವಿಷಯ ತಿಳಿಯುತ್ತಿದ್ದಂತೆ ತಾಯಿ-ಮಗಳಿಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಆ ಸೂಟ್ಕೇಸಿನಲ್ಲಿ ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಧರಿಸಲೆಂದು ಅವರು ತಂದಿದ್ದ ದುಬಾರಿ ಡ್ರೆಸ್ಗಳು ಕೂಡ ಇದ್ದವು.
ಬೆಂಗಳೂರು: ವಿಮಾನದಲ್ಲಿ ಒಣಗಿದ ತೆಂಗಿನಕಾಯಿ ತೆಗೆದುಕೊಂಡು ಹೋಗುವಂತಿಲ್ಲ ಎಂಬುದು ಗೊತ್ತಿಲ್ಲದೆ ಯುವತಿ ಹಾಗೂ ಆಕೆಯ ತಾಯಿ ವಿಮಾನದಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗುತ್ತಿದ್ದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಅವರಿಬ್ಬರಿಗೂ ತೆಂಗಿನ ಕಾಯಿಯಿದ್ದ ತಮ್ಮ ಸೂಟ್ಕೇಸ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಒಣಗಿದ ತೆಂಗಿನಕಾಯಿಯಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುವುದರಿಂದ ವಿಮಾನದಲ್ಲಿ ಕೊಬ್ಬರಿ ಕಾಯಿಯನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ತಾವು ತೆಗೆದುಕೊಂಡು ಬಂದಿದ್ದ 6 ತೆಂಗಿನಕಾಯಿ ಇರುವ ಸೂಟ್ಕೇಸನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ವಿಷಯ ತಿಳಿಯುತ್ತಿದ್ದಂತೆ ತಾಯಿ-ಮಗಳಿಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಆ ಸೂಟ್ಕೇಸಿನಲ್ಲಿ ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಧರಿಸಲೆಂದು ಅವರು ತಂದಿದ್ದ ದುಬಾರಿ ಡ್ರೆಸ್ಗಳು ಕೂಡ ಇದ್ದವು. ಆ ಮದುವೆಯ ಶಾಸ್ತ್ರದಲ್ಲಿ ಬಳಸಲೆಂದು ಒಣ ಕೊಬ್ಬರಿ ಕಾಯಿಗಳನ್ನು ಅವರು ತಂದಿದ್ದರು. ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಅವರ ಸಂಬಂಧಿಕರ ಮದುವೆಯ ಭಾಯಿ ದೂಜ್ ಆಚರಣೆಯಲ್ಲಿ ಪಾಲ್ಗೊಳ್ಳಲು ಕಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ಆದರೆ, ಆ ಸೂಟ್ಕೇಸ್ ಅನ್ನು ಬೆಂಗಳೂರಿನಲ್ಲೇ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ತಾಯಿ-ಮಗಳಿಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಬೆಂಗಳೂರಿನಲ್ಲಿ ಎಜುಕೇಷನ್ ಕಂಟೆಂಟ್ ಡೆವಲಪರ್ ಆಗಿರುವ ಆಸ್ತಾ ಚೌಧರಿ ಮತ್ತು ಆಕೆಯ ತಾಯಿ ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಅವರ ಸೂಟ್ಕೇಸ್ ಬೆಂಗಳೂರಿನಲ್ಲೇ ಉಳಿದಿದೆ ಎಂಬುದು ಅವರು ದೆಹಲಿಗೆ ಹೋದ ನಂತರ ತಿಳಿದಿದೆ. ದೆಹಲಿಯಿಂದ ಉತ್ತರಾಖಂಡದಲ್ಲಿರುವ ಕಾಶಿಪುರದಲ್ಲಿ ಸಂಬಂಧಿಕರ ಮದುವೆಗೆ ಹೋಗಬೇಕಾಗಿತ್ತು.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಾವು ಎರಡು ಸೂಟ್ಕೇಸ್ನೊಂದಿಗೆ ಹೊರಟಿದ್ದೆವು. ನಾವು ದೆಹಲಿಗೆ ಹೋದ ನಂತರ ನಾವು ಚೆಕ್ ಇನ್ ಮಾಡಿದ್ದ ಒಂದು ಸೂಟ್ಕೇಸ್ ಮಿಸ್ ಆಗಿರುವುದು ಗಮನಕ್ಕೆ ಬಂದಿತು. ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿಯ ಬಳಿ ವಿಚಾರಿಸಿದಾಗ ಆ ಸೂಟ್ಕೇಸಿನಲ್ಲಿ ಒಣಗಿದ ತೆಂಗಿನ ಕಾಯಿ ಇದ್ದುದರಿಂದ ಅದನ್ನು ಬೆಂಗಳೂರಿನಲ್ಲೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿತು ಎಂದು ತಾಯಿ-ಮಗಳು ಹೇಳಿದ್ದಾರೆ.
ಬ್ಯಾಗೇಜ್ ಚೆಕ್ ಮಾಡಿದ ಕೂಡಲೆ ಒಣ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗಿಲ್ಲ ಎಂಬುದನ್ನು ಏರ್ಪೋರ್ಟ್ ಸಿಬ್ಬಂದಿ ನನಗೆ ತಿಳಿಸಬೇಕಿತ್ತು. ಬೆಂಗಳೂರಿನಲ್ಲೇ ನಮಗೆ ವಿಷಯ ಗೊತ್ತಾಗಿದ್ದರೆ ಆ ತೆಂಗಿನಕಾಯಿಗಳನ್ನು ಅಲ್ಲೇ ಬಿಟ್ಟು ಮದುವೆಯ ಡ್ರೆಸ್ ಅನ್ನಾದರೂ ತೆಗೆದುಕೊಂಡು ಬರುತ್ತಿದ್ದೆವು. ನಮಗೆ ತೆಂಗಿನಕಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಬಾರದು ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಆ ಬ್ಯಾಗ್ನ ಮಾಲೀಕರು ಆರೋಪಿಸಿದ್ದಾರೆ.
ಆದರೆ, ಈ ಬಗ್ಗೆ ಏರ್ ಇಂಡಿಯಾ ವಕ್ತಾರರು ಸ್ಪಷ್ಟನೆ ನೀಡಿದ್ದು, ವಿಮಾನದಲ್ಲಿ ಲೈಟರ್, ಬೆಂಕಿಪೊಟ್ಟಣ, ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳು, ಒಣಗಿದ ತೆಂಗಿನಕಾಯಿ ಮತ್ತಿತರ ವಸ್ತುಗಳನ್ನು ತರಬಾರದು ಎಂದು ಟಿಕೆಟ್ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಪ್ರಯಾಣಿಕರು ವಿಮಾನ ಸಂಚಾರಕ್ಕೂ ಮೊದಲು ನಿಯಮಗಳನ್ನು ಸರಿಯಾಗಿ ಓದಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಪತ್ನಿ ಕೊಂದು ಆಂಧ್ರಕ್ಕೆ ಎಸ್ಕೇಪ್ ಆದ ಪತಿ ಸಿಕ್ಕಿದ್ದು ಬೀದಿ ಹೆಣವಾಗಿ
ಬೆಂಗಳೂರಿನಿಂದ ಹೊರಟಿದ್ದ ಗೋ ಏರ್ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ; ಪ್ರಯಾಣಿಕರು ಸುರಕ್ಷಿತ