
ಮೈಸೂರು, ಏಪ್ರಿಲ್ 9: ಮೆಮು ಪ್ಯಾಸೆಂಜರ್ ರೈಲು (Memu Passenger Train) ಇದು ಬಡವರು ಮತ್ತು ಮಧ್ಯಮ ವರ್ಗದವರ ಪಾಲಿನ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆ. ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. 2018 ರಲ್ಲಿ ರೈಲ್ವೆ ಇಲಾಖೆ ಮೈಸೂರು ಟು ಬೆಂಗಳೂರು ನಡುವೆ ಈ ರೈಲಿನ (Mysuru Bengaluru Train) ಸೇವೆಯನ್ನು ಆರಂಭಿಸಿತು. ಆರಂಭದಲ್ಲಿ 20 ಕೋಚ್ಗಳೊಂದಿಗೆ ಈ ರೈಲು ಸಂಚಾರ ಆರಂಭಿಸಿತು. ಆಮೇಲೆ 16 ಕೋಚ್ಗೆ ಇಳಿಕೆ ಮಾಡಲಾಯಿತು. ಕಳೆದ ಆರು ತಿಂಗಳಿನಿಂದ 12 ಕೋಚ್ಗಳಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಈ ಮೆಮು ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಪ್ರಾಣ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂತಾಗಿದೆ. ಉಸಿರಾಡಲು ಜಾಗವಿಲ್ಲದಷ್ಟು ಜನ ಪ್ರಯಾಣ ಮಾಡುತ್ತಿದ್ದಾರೆ.
ಮೆಮು ರೈಲಿನ ಕೋಚ್ ಕಡಿಮೆ ಮಾಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಈ ರೈಲಿನಲ್ಲಿ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ನಾವು ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಅಲ್ಲದೆ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೂ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕ ರಂಜಿತ್ ಕುಮಾರ್ ಎಂಬವರು ಹೇಳಿದ್ದಾರೆ.
ಈ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ ಕೇವಲ 35 ರೂಪಾಯಿ ಮಾತ್ರ. ಬೆಳಗ್ಗೆ 6:10 ಕ್ಕೆ ಮೈಸೂರಿನಿಂದ ಹೊರಡುತ್ತದೆ, ಇತ್ತ ರಾತ್ರಿ 7 ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ಹೊರಡುತ್ತದೆ. ಬೆಂಗಳೂರು ಟು ಮೈಸೂರು ನಡುವೆ ಇರುವ ಒಟ್ಟು 22 ಸ್ಟೇಷನ್ ನಲ್ಲೂ ಈ ರೈಲು ಸ್ಟಾಪ್ ನೀಡುತ್ತದೆ. ಇದರಿಂದ 2500 ರಿಂದ 3 ಸಾವಿರ ಪ್ರಯಾಣಿಕರು ಪ್ರತಿನಿತ್ಯ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರೈಲಿನಲ್ಲಿ ಪ್ರಯಾಣಿಕರು ನಿಲ್ಲಲೂ ಆಗದೆ ಕೂರಲೂ ಆಗದೆ ಪರದಾಡುವಂತಾಗಿದೆ.
ಇದನ್ನೂ ಓದಿ: ಕರ್ನಾಟಕ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದ ರೈಲ್ವೆ: ಈ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶ
ಒಟ್ಟಿನಲ್ಲಿ ಈ ಮೆಮು ರೈಲಿನಲ್ಲಿ ಪ್ರತಿನಿತ್ಯ ಓವರ್ ಲೋಡ್ ಆಗುತ್ತಿದ್ದು, ಇದರಿಂದ ಪ್ರಯಾಣಿಕರು ಉಸಿರಾಡಲೂ ಆಗದೆ ಸಂಕಷ್ಟ ಎದುರಿಸುವಂತಾಗಿರುವುದಂತೂ ಸುಳ್ಳಲ್ಲ. ಕೂಡಲೇ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕ್ರಮ ಗೊಳ್ಳಬೇಕಿದೆ.
Published On - 6:36 am, Wed, 9 April 25