
ಬೆಂಗಳೂರು, ಮೇ 27: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಮೆಟ್ರೋ ರೈಲು ಕಾರ್ಯಾರಂಭ ಮತ್ತೆ ಮತ್ತೆ ವಿಳಂಬವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2024ರ ಮಧ್ಯಭಾಗದಲ್ಲೇ ಯೆಲ್ಲೋ ಲೈನ್ನಲ್ಲಿ ಮೆಟ್ರೋ (Namma Metro) ರೈಲು ಸಂಚಾರ ಶುರುವಾಗಬೇಕಿತ್ತು. ಆದರೆ, ಅದು 2025ಕ್ಕೆ ಮುಂದೂಡಲ್ಪಟ್ಟಿತ್ತು. ನಂತರ 2025ರ ಮೇ ಅಂತ್ಯಕ್ಕೆ ಅಥವಾ ಜೂನ್ ತಿಂಗಳಲ್ಲಿ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟ ಶುರುವಾಗಬಹುದು ಎನ್ನಲಾಗಿತ್ತು. ಇದೀಗ ಆ ಆಸೆಯೂ ಕನಸಾಗಿದೆ. ಜುಲೈ ಅಂತ್ಯದ ಮೊದಲು ಅಥವಾ ಆಗಸ್ಟ್‌ವರೆಗೆ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ಆರ್‌ವಿ ರೋಡ್ನಿಂದ ಬೊಮ್ಮಸಂದ್ರ ಸಂಪರ್ಕಿಸುವ 19.15 ಕಿಮೀ ಮಾರ್ಗದಲ್ಲಿ ಸದ್ಯಕ್ಕೆ ಮೆಟ್ರೋ ರೈಲು ಸಂಚಾರ ಆರಂಭವಾಗದು ಎನ್ನಲಾಗಿದೆ. ಸಿಗ್ನಲಿಂಗ್ ವ್ಯವಸ್ಥೆಗಳಿಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಅನುಮೋದನೆಗಳು ಬಾಕಿ ಉಳಿದಿರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದ ಸಿಗ್ನಲಿಂಗ್ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿರುವ ಸೀಮೆನ್ಸ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಸಿಗ್ನಲಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ, ಸಾಫ್ಟ್‌ವೇರ್ ಡೇಟಾಸೆಟ್‌ಗಳಲ್ಲಿ ದೋಷಕಂಡುಬಂದಿತ್ತು. ಇದೇ ಕಾರಣದಿಂದ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹಳದಿ ಮಾರ್ಗದ ಮೆಟ್ರೋ ರೈಲು ಚಲನೆಯನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಿಂದ ನಿಯಂತ್ರಿಸಲಾಗುತ್ತದೆ. ಸಣ್ಣ ದೋಷ ಇದ್ದರೂ ವ್ಯವಸ್ಥೆಯ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಂಆರ್‌ಸಿಎಲ್ ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದರೂ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲಿಸುವ ಮೊದಲು ಐಎಸ್‌ಎ ಅನುಮೋದನೆ ನಿರ್ಣಾಯಕವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಪರೀಕ್ಷೆಗಳು ಅನುಮೋದನೆ ಪಡೆಯದ ಹೊರತು, ಸೀಮೆನ್ಸ್ ಕಂಪನಿಯು ಸ್ವತಂತ್ರ ಮೌಲ್ಯಮಾಪಕರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಈಗ ವಿಳಂಬವಾಗುತ್ತಿರುವುದಕ್ಕೆ ಬಿಎಂಆರ್‌ಸಿಎಲ್ ಕಾರಣವಲ್ಲ. ಜೂನ್ ಅಂತ್ಯದ ವೇಳೆಗೆ ಡೇಟಾಸೆಟ್‌ಗಳು ಸರಿಯಾಗಲಿವೆ ಎಂದು ಸೀಮೆನ್ಸ್ ಭರವಸೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ಟ್ರೈನು! ಬೆಂಗಳೂರು ನಿವಾಸಿಗಳಲ್ಲಿ ರೋಮಾಂಚನಭರಿತ ಸಂಭ್ರಮ!
ಮತ್ತೊಂದೆಡೆ, ಹಳದಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವ ಆರು ರೈಲುಗಳ ಪೈಕಿ ಮೂರು ಮಾತ್ರ ಈರೆಗೆ ಬೆಂಗಳೂರಿಗೆ ಬಂದಿವೆ. ಇವೆಲ್ಲ ಚೀನಾದಿಂದ ಬಂದವುಗಳಾಗಿವೆ. ರೈಲು ಪೂರೈಸುವ ಗುತ್ತಿಗೆ ಪಡೆದಿರುವ ಟಿಟಾಘರ್ ರೈಲ್ ಸಿಸ್ಟಂ ಲಿಮಿಟೆಡ್ ನಿಗದಿತ ಅವಧಿಯೊಳಗೆ ಎಲ್ಲ ರೈಲುಗಳನ್ನು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಇದೂ ಸಹ ಹಳದಿ ಮಾರ್ಗದ ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಗಿದೆ.
ಹಳದಿ ಮಾರ್ಗ ಕಾರ್ಯಾಚರಣೆಗಳಿಗೆ 2025 ರ ಮೇ ತಿಂಗಳ ಗಡುವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಗದಿಪಡಿಸಿದ್ದರು. ಆದಾಗ್ಯೂ ವಿಳಂಬವಾಗುತ್ತಲೇ ಇದೆ.