ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷಾಚರಣೆ (New Year) ದಿನ ಬೆಂಗಳೂರು (Bengaluru) ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ 70 ಜನರನ್ನು ಬಂಧಿಸಲಾಗಿದೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸೇರಿದಂತೆ, ವಿವಿಧ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayananda) ತಿಳಿಸಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್ಗಳನ್ನು ಹೊಸ ವರ್ಷಾಚರಣೆ ದಿನ (ಡಿಸೆಂಬರ್.31) ರಂದು ರಾತ್ರಿ 1 ಗಂಟೆಯ ಒಳಗಾಗಿ ಬಂದ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಅಂದು, ನಶೆಯಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: New Year 2025: ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು, ಕಾರಣ?
ಬೆಂಗಳೂರು ಹೊರ ವಲಯದಲ್ಲಿ ನಡೆಯುವ ರೇವ್ ಪಾರ್ಟಿ ಸೇರಿದಂತೆ ಎಲ್ಲ ಪಾರ್ಟಿಗಳ ಮೇಲೆ ಕಣ್ಣಿಡಲಾಗಿದೆ. ಇನ್ನು, ನಗರದಲ್ಲಿ ಎಂಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಹೆಚ್ಚು ಜನರು ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ, ಶ್ವಾನದಳದಿಂದ ತಪಾಸಣೆ ಮಾಡಲಾಗುತ್ತೆ. ಹೆಚ್ಚಿನ ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ದಳ ವಾಹನ ಇರುತ್ತದೆ ಎಂದು ತಿಳಿಸಿದರು.
ಬ್ರಿಗೆಡ್, ಎಂಜಿ ರೋಡ್ನಲ್ಲಿ ಏಕಮುಖ ಸಂಚಾರವಿರುತ್ತದೆ. ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಸೈಬರ್ ವಂಚನೆಗೆ ಒಳಗಾಗಿದ್ದರೆ ಟೋಲ್ ಫ್ರೀ ನಂಬರ್ 1930ಗೆ ಕರೆ ಮಾಡಿ ಮಾಹಿತಿ ನೀಡಿ. ಅದನ್ನ ಹೊರತುಪಡಿಸಿ ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ನಂಬರ್ಗೆ ಕರೆ ಮಾಡಬೇಡಿ. ಏಕೆಂದರೆ, ಅಧಿಕಾರಿಗಳು ಬೇರೆ ಕೆಲಸದಲ್ಲಿ ನಿರತರಾಗಿದ್ದರೆ ಕೂಡಲೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, 1930 ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡರು.
ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಮಾಡಿದ ಪ್ರಕರಣ ಸಂಬಂಧ ಎರಡು ಕೇಸ್ ದಾಖಲಾಗಿವೆ. ಎರಡೂ ವಂಚನೆ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ದಾಖಲಾಗಿರುವ ಸೆಕ್ಷನ್ಗಳ ಆಧಾರದಲ್ಲಿ, ಆರೋಪಿಗಳ ಸಹಕಾರದ ಅನ್ವಯ ಬಂಧನ ಮಾಡಲಾಗುವುದು. ಚಂದ್ರಾಲೇಔಟ್ ಠಾಣೆ ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sat, 28 December 24