ನೇಪಾಳಿಗಳನ್ನು ಕೆಲಸಕ್ಕಿಟ್ಟುಕೊಳ್ಳುವ ಮುನ್ನ ಎಚ್ಚರ; ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 23 ಆರೋಪಿಗಳು ಅರೆಸ್ಟ್
ದಕ್ಷಿಣ ವಿಭಾಗದ ಎರಡು ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ 23 ನೇಪಾಳಿಗಳು ಅರೆಸ್ಟ್ ಆಗಿದ್ದಾರೆ. 2 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲ್, ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ನೇಪಾಳ ಮೂಲದ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರವಹಿಸಿ. ಏಕೆಂದರೆ ದಕ್ಷಿಣ ವಿಭಾಗದ ಎರಡು ಠಾಣಾ ವ್ಯಾಪ್ತಿಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 23 ನೇಪಾಳಿಗಳು ಅರೆಸ್ಟ್ ಆಗಿದ್ದಾರೆ. 2 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲ್, ವಿದೇಶಿ ಕರೆನ್ಸಿ ದೋಚಿದ್ದವರ ಬಂಧನವಾಗಿದೆ.
ಕೆಲಸಕ್ಕಿದ್ದ ಮನೆಯಲ್ಲೇ ಕಳ್ಳತನ
ನೇಪಾಳ ಮೂಲದ ಎಂಟು ಆರೋಪಿಗಳನ್ನ ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೇತ್ರಾ ಶಾಹಿ (43), ಲಕ್ಷ್ಮಿ ಸೇಜುವಲ್ (33), ಗೋರಕ್ ಬಹದ್ದೂರ್ (50), ಭೀಮ್ ಬಹದ್ದೂರ್ (45), ಅಂಜಲಿ(31) ಅಬೇಶ್ ಶಾಹಿ (21) ಪ್ರಶಾಂತ್ (21), ಪ್ರಕಾಶ್ (31) ಬಂಧಿತ ಆರೋಪಿಗಳು. ಕಿರಣ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ಎಂಬ ಆರೋಪಿಗಳು, ಕಿರಣ್ ಪೋಷಕರು ತಿರುಪತಿಗೆ ತೆರಳಿದ್ದಾಗ ಗುಂಪು ಕಟ್ಟಿಕೊಂಡು ಮನೆಗೆ ನುಗ್ಗಿ ಮನೆಯಲ್ಲಿ ಕೃತ್ಯ ಎಸಗಿದ್ದರು. ಬಳಿಕ ಕಿರಣ್ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು, ಪಿಸ್ತೂಲ್, 3 ಜೀವಂತ ಗುಂಡುಗಳು ವಶಕ್ಕೆ ಪಡೆಯಲಾಗಿದೆ.
ವಯೋವೃದ್ದ ಮಹಿಳೆಯಿದ್ದ ಮನೆಯಲ್ಲಿ ಕಳ್ಳತನ
ವಯೋವೃದ್ದ ಮಹಿಳೆಯಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಹಾಗೂ ರಮಿತ ಠಾಕೂರ್, ವಿಮಲಾ ಬಂಧಿತರು. ಬ್ರಿಜ್ ಭೂಷಣ್ ಎಂಬುವವರ ಮನೆಯಲ್ಲಿ ಆರೋಪಿ ವಿಮಲಾ ಕೆಲಸಕ್ಕಿದ್ದಳು. ಬ್ರಿಜ್ ಭೂಷಣ್ ಅವರು ವಯೋವೃದ್ದ ತಾಯಿಯನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದಾಗ ಆತನ ಮನೆಯಲ್ಲಿ ತನ್ನ ಗ್ಯಾಂಗ್ ನೊಂದಿಗೆ ವಿಮಲಾ ಕೃತ್ಯ ಎಸಗಿದ್ದಳು. ಸದ್ಯ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಬಂಧಿತರಿಂದ 320 ಗ್ರಾಂ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿ ವಸ್ತು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 9 ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ ಮಗಳು: ಬಳಿಕ ಆಗಿದ್ದೇನು?
ಕೆಲಸಕ್ಕಿದ್ದ ಮನೆಯಲ್ಲಿ ಕೃತ್ಯ ಎಸಗಿದ್ದ ದಂಪತಿ ಸಹಿತ ಐವರ ಬಂಧನ
ಜಯನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಬಂಧಿತರು. ಬಿಕಾಸ್ ಹಾಗೂ ಸುಷ್ಮಿತಾ ದಂಪತಿ ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಕೆಲಸಕ್ಕಿದ್ದರು. ಸಮಯ ನೋಡಿಕೊಂಡು ತಮ್ಮ ಗ್ರೂಪ್ನೊಂದಿಗೆ ಕಳ್ಳತನ ಮಾಡಿದ್ದರು. ಬಂಧಿತರಿಂದ 292 ಗ್ರಾಂ ಚಿನ್ನಾಭರಣ, 15 ಸಾವಿರ ನಗದು, 168 ಗ್ರಾಂ ಬೆಳ್ಳಿ ವಸ್ತುಗಳು, ವಿವಿಧ ಬ್ರ್ಯಾಂಡ್‌ನ 18 ವಾಚ್ ಗಳು ತಲಾ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:17 pm, Sat, 11 March 23