ಬೆಂಗಳೂರು: ವಾಟ್ಸಾಪ್ ವಿಡಿಯೋ ಕಾಲ್ ರಿಸೀವ್ ಮಾಡಿ 35 ಸಾವಿರ ರೂ. ಕಳೆದುಕೊಂಡ ನಿವೃತ್ತ ಸರ್ಕಾರಿ ನೌಕರ

ಯಲಹಂಕ ನ್ಯೂ ಟೌನ್‌ನ ಕೆಹೆಚ್‌ಬಿ ಕಾಲೋನಿ ನಿವಾಸಿಗೆ ಆಗಸ್ಟ್ 11 ರ ಮಧ್ಯರಾತ್ರಿ ವಾಟ್ಸಾಪ್ ವಿಡಿಯೋ ಕಾಲ್ ಬಂದಿದ್ದು ಕಾಲ್ ರಿಸೀವ್ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ನಗ್ನವಾಗಿ ನಿಂತಿರುವುದು ಕಂಡು ಬಂದಿದೆ. ಸೈಬರ್ ಖದೀಮರು ನಿವೃತ್ತ ಸರ್ಕಾರಿ ನೌಕರನಿಗೆ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಹಣ ನೀಡುವಂತೆ ಬೇಡಿಕೆ ಇಟ್ಟು 35,000 ರೂಪಾಯಿ ಪೀಕಿದ್ದಾರೆ.

ಬೆಂಗಳೂರು: ವಾಟ್ಸಾಪ್ ವಿಡಿಯೋ ಕಾಲ್ ರಿಸೀವ್ ಮಾಡಿ 35 ಸಾವಿರ ರೂ. ಕಳೆದುಕೊಂಡ ನಿವೃತ್ತ ಸರ್ಕಾರಿ ನೌಕರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 21, 2023 | 3:22 PM

ಬೆಂಗಳೂರು, ಆ.21: ವಾಟ್ಸಾಪ್ ವಿಡಿಯೋ ಕಾಲ್ ರಿಸೀವ್ ಮಾಡಿದ 74 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರು ಬರೋಬ್ಬರಿ 35,000 ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ(Cyber Crime). ಮಹಿಳೆಯೊಬ್ಬರು ನಗ್ನರಾಗಿ ವಾಟ್ಸಾಪ್ ವಿಡಿಯೋ ಕಾಲ್(WhatsApp Video Call) ಮಾಡಿದ್ದು ಕರೆಯನ್ನು ಸ್ವೀಕರಿದುತ್ತಿದ್ದಂತೆಯೇ ಸೈಬರ್ ಖದೀಮರು ನಿವೃತ್ತ ಸರ್ಕಾರಿ ನೌಕರನಿಗೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಸಿ ಹಣ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದಾರೆ.

ಯಲಹಂಕ ನ್ಯೂ ಟೌನ್‌ನ ಕೆಹೆಚ್‌ಬಿ ಕಾಲೋನಿ ನಿವಾಸಿ ಪ್ರಶಾಂತ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 11 ರ ಮಧ್ಯರಾತ್ರಿ ಪ್ರಶಾಂತ್‌ಗೆ ವಾಟ್ಸಾಪ್ ವಿಡಿಯೋ ಕಾಲ್ ಬಂದಿತ್ತು. ಕಾಲ್ ರಿಸೀವ್ ಮಾಡುತ್ತಿದ್ದಂತೆ ನಗ್ನಳಾಗಿದ್ದ ಮಹಿಳೆಯೊಬ್ಬಳು ಕಣ್ಣ ಮುಂದೆ ಬಂದಿದ್ದಾಳೆ. ಗಾಬರಿಗೊಂಡ ಪ್ರಶಾಂತ್ ಮಹಿಳೆಯನ್ನು ನೀ ಯಾರೆಂದು ಪ್ರಶ್ನಿಸಿದ್ದಾರೆ. ಆದ್ರೆ ಪೋಸ್ ನೀಡುತ್ತಿದ್ದ ಮಹಿಳೆ ಏನು ಉತ್ತರ ಕೊಟ್ಟಿಲ್ಲ. ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ಪ್ರಶಾಂತ್ ಅವರು ಕಾಲ್ ಕಟ್ ಮಾಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರು.

ಮೂರು ದಿನಗಳ ನಂತರ ಪ್ರಶಾಂತ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ದೆಹಲಿ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ನಗ್ನವಾಗಿ ವಿಡಿಯೋ ಕಾಲ್‌ನಲ್ಲಿದ್ದ ಮಹಿಳೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಆಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಪ್ರಶಾಂತ್ ಅವರು ಮಹಿಳೆಗೆ ತಾನು ಯಾವುದೇ ಫೋನ್ ಕರೆ ಮಾಡಿಲ್ಲ ಎಂದು ವಿವರಿಸಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸ್ ಎಂದು ಕರೆ ಮಾಡಿದ್ದ ವ್ಯಕ್ತಿ ಪ್ರಶಾಂತ್​ಗೆ ಉತ್ತರ ನೀಡಲು ಬಿಡದೆ, ನಿಮ್ಮ ವಿಡಿಯೋ ಕಾಲ್ ರೆಕಾರ್ಡ್ ಆಗಿದೆ. ಈ ಪ್ರಕರಣದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಬಹುದು ಎಂದು ಬೆದರಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊದಲಿಗೆ 11,500 ರೂ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದು ಬಳಿಕ 23 ಸಾವಿರ ರೂ ಪೀಕಿದ್ದಾರೆ. ಪ್ರಶಾಂತ್ ಕೂಡು ದೆಹಲಿ ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿ ಬ್ಯಾಂಕ್ ಖಾತೆಗೆ ಒಟ್ಟು 34,500 ರೂ. ಹಾಕಿದ್ದಾರೆ.

ಇದನ್ನೂ ಓದಿ: ಕೊರಿಯರ್ ಮೂಲಕ ವಂಚನೆ: ನೀವು ಸ್ವಲ್ಪ ಯಾಮಾರಿದರೂ ವಂಚಕರ ಆಟ ಹೇಗಿರುತ್ತೆ ನೋಡಿ

ಇಷ್ಟೆಲ್ಲಾ ಆದ ಬಳಿಕ ಪ್ರಶಾಂತ್ ದೆಹಲಿ ಸೈಬರ್ ಪೊಲೀಸ್ ಎಂದು ಹೇಳಿಕೊಮಡ ವ್ಯಕ್ತಿಗೆ ಇನ್ನು ಮುಂದೆ ಈ ವಿಚಾರವಾಗಿ ತಲೆ ಕೆಡಿಸಿಕೊಳ್ಳಬಾರದು ಎಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಬುಧವಾರ ಮತ್ತೆ ಅದೇ ನಂಬರ್‌ನಿಂದ ಪ್ರಶಾಂತ್​ಗೆ ಕರೆಗಳು ಬಂದಿವೆ. ಈ ವೇಳೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಲಾಗಿದೆ. ಮಹಿಳೆ ತನಗಾದ ಅವಮಾನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಲೆ. ಹೀಗಾಗಿ ನಿಮಗೆ ಹೆಚ್ಚು ತೊಂದರೆಯಾಗಬಹುದು. ತನ್ನ ಮೇಲಿನ ಆರೋಪವನ್ನು ತಪ್ಪಿಸಲು 4 ಲಕ್ಷ ರೂ. ಕೊಡಿ ಎಂದು ಕರೆ ಮಾಡಿದ ವ್ಯಕ್ತಿ ಪ್ರಶಾಂತ್ ಅವರಿಗೆ ಡಿಮ್ಯಾಂಡ್ ಮಾಡಿದ್ದಾನೆ. ಇದನ್ನು ಹೇಗೆ ಬಿಟ್ಟರೆ ಸಮಸ್ಯೆ ಆಗುತ್ತೆ ಎಂದು ಪ್ರಶಾಂತ್ ಯಲಹಂಕ ನ್ಯೂ ಟೌನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಶಾಂತ್ ಠಾಣೆಯಲ್ಲಿದ್ದಾಗ, ದುಷ್ಕರ್ಮಿ ಮತ್ತೆ ಕರೆ ಮಾಡಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಫೋನ್ ರಿಸೀವ್ ಮಾಡಿದ್ದಾರೆ. ಅಂದಿನಿಂದ ಪ್ರಶಾಂತ್​ಗೆ ಕರೆಗಳು ಬಂದಿಲ್ಲ. ಸದ್ಯ ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿದ್ದು, ಇಂತಹ ಕರೆಗಳು ಪ್ರೀ ರೆಕಾರ್ಡ್ ಆಗಿರುತ್ತವೆ. ಮಹಿಳೆಯರ ವಿಡಿಯೋ ಹಾಕಿ ಕರೆ ಮಾಡಿ ಕರೆ ರಿಸೀವ್ ಮಾಡುತ್ತಿದ್ದಂತೆ ಕಾಲ್ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳಿಂದ ಇಂತಹ ಕರೆಗಳು ಬರುತ್ತಿವೆ ಎಂದು ತಿಳಿಸಿದರು. ಪ್ರಶಾಂತ್ ನೀಡಿದ ದೂರಿನ ಮೇರೆಗೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ