ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ (Bengaluru North) ವಿಭಾಗದ ಪೊಲೀಸರು (Police) ಮಂಗಳವಾರ (ಮಾ.26) ತಡರಾತ್ರಿ 290 ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. 50 ಪೊಲೀಸರ ತಂಡ ಏಕಕಾಲಕ್ಕೆ ರಾಜಗೋಪಾಲನಗರ, ಆರ್ಎಂಸಿ ಯಾರ್ಡ್, ಪೀಣ್ಯ ಸೇರಿದಂತೆ ವಿವಿಧ ನಗರಗಳಲ್ಲಿ ವಾಸವಾಗಿರುವ ರೌಡಿಶೀಟರ್ ಮನೆಗಳಲ್ಲಿ ಶೋಧ ನಡೆಸಿ, ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಮೂರು ಉಪವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು ರೌಡಿಶೀಟರ್ಗಳ ಮನೆಗಳ ಮೇಲೆ ಗುರುವಾರ (ಮಾ. 21) ರಂದು ಮುಂಜಾನೆ ಹಠಾತ್ನೆ ದಾಳಿ ಮಾಡಿದ್ದರು. 234 ಮನೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, 177 ರೌಡಿಗಳು ಮನೆಯಲ್ಲಿರಲಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಎಂಟು ರೌಡಿಗಳ ಮನೆಗಳಲ್ಲೂ ತಪಾಸಣೆ ನಡೆಸಲಾಗಿತ್ತು.
ಜಯನಗರ, ಬನಶಂಕರಿ, ಚೆನ್ನಮ್ಮನ ಅಚ್ಚುಕಟ್ಟು, ಕುಮಾರಸ್ವಾಮಿ ಲೇಔಟ್ ಸೇರಿದಂತೆ ದಕ್ಷಿಣ ವಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ರೌಡಿಶೀಟರ್ ಮನೆಗಳನ್ನು ಪೊಲೀಸರು ಜಾಲಾಡಿದ್ದರು. ಸುಬ್ರಹ್ಮಣ್ಯಪುರ ಉಪವಿಭಾಗದ ವ್ಯಾಪ್ತಿಯಲ್ಲಿ 125, ವಿವಿ ಪುರಂ ವ್ಯಾಪ್ತಿಯಲ್ಲಿ 76, ಜಯನಗರ ವ್ಯಾಪ್ತಿಯಲ್ಲಿ 33 ಮನೆಗಳನ್ನು ಪೊಲೀಸರು ಪರಿಶೀಲಿಸಿದ್ದರು.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ಹಲವಡೆ ಲೋಕಾಯುಕ್ತ ದಾಳಿ, ಪಿಡಿಒ ವಶಕ್ಕೆ
ರೌಡಿಶೀಟರ್ಗಳ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಾಗಿತ್ತು. ಆದರೆ, ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.
ಬೆಂಗಳೂರಿನ ಎಂಟು ವಿಭಾಗದಲ್ಲಿ 102 ಕಡೆ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಕೇಂದ್ರ ವಿಭಾಗದಲ್ಲಿ 16 ಕಡೆ, ಪೂರ್ವ ವಿಭಾಗದಲ್ಲಿ 10, ಉತ್ತರ ವಿಭಾಗದಲ್ಲಿ 27, ಈಶಾನ್ಯ ವಿಭಾಗದಲ್ಲಿ 12, ದಕ್ಷಿಣ ವಿಭಾಗದಲ್ಲಿ 8, ಆಗ್ನೇಯ ವಿಭಾಗದಲ್ಲಿ 10, ಪಶ್ಚಿಮ ವಿಭಾಗದಲ್ಲಿ 12, ವೈಟ್ ಫೀಲ್ಡ್ ವಿಭಾಗದಲ್ಲಿ 7 ಕಡೆ ನಾಕಾಬಂದಿ ಹಾಕಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Wed, 27 March 24