ಬೆಂಗಳೂರು, ಮೇ.11: ಸಂಜೆ ಆದ್ರೆ ಸಾಕು ಬೆಂಗಳೂರು ಮಳೆಯಲ್ಲಿ ಮಿಂದೇಳ್ತಿದೆ (Bengaluru Rain). ನಿನ್ನೆ ರಾತ್ರಿಯೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದೆ. ಮುಖ್ಯವಾಗಿ ನಾಗರಭಾವಿ NGF ಬಡಾವಣೆಯಲ್ಲಿ ಬಡ ಜೀವಗಳು ಪ್ರಾಣಾಪಾಯದಿಂದ ಪಾರಾಗಿದೆ. NGF ಬಡಾವಣೆಯ 9ನೇ ಕ್ರಾಸ್ ನಲ್ಲಿ ಬೆಸ್ಕಾಂ ಲೈಟ್ ಕಂಬ ಹಾಗೂ ಬೃಹತ್ ಮರವೊಂದು ಶೆಡ್ ಮನೆಯ ಮುಂದೆ ಬಿದ್ದಿದೆ. ಅಕಸ್ಮಾತ್ ಶೆಡ್ ಮೇಲೆ ಬಿದ್ದಿದ್ರೆ ಅಲ್ಲಿ ವಾಸವಿದ್ದ ಶಿವು ಕುಟುಂಬ ಮಣ್ಣುಪಾಲಾಗುವ ಸಾಧ್ಯತೆ ಇತ್ತು. ರಾಯಚೂರಿನಿಂದ ವಲಸೆ ಬಂದು ಕೂಲಿ ಕೆಲಸ ಮಾಡಿಕೊಂಡಿರುವ ಶಿವು, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಈ ಶೆಡ್ ನಲ್ಲಿ ವಾಸವಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಈ ಕುಟುಂಬ ಪಾರಾಗಿದೆ.
ಇದರ ಜೊತೆಗೆ ಚಾಮರಾಜಪೇಟೆಯಲ್ಲೂ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್ಮೆಂಟ್ ನಿಂದ ಹರಿಯುವ ನೀರು, ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ನಿವಾಸಿಗಳು ಅಪಾರ್ಟ್ಮೆಂಟ್ ಮುಂದೆ ಮಳೆಯಲ್ಲಿಯೇ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಮಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಮರಗಳು ನೆಲಕ್ಕುರುಳಿದ್ರೆ, 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದೆ.
ಇನ್ನೂ ನಾಗರಬಾವಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿದ್ದು, ಒಂದೇ ರಸ್ತೆಯ ಉದ್ದಕ್ಕೂ ಸುಮಾರು 10ಕ್ಕೂ ಅಧಿಕ ಮರಗಳು ನೆಲಕ್ಕಚ್ಚಿದೆ, ಪರಿಣಾಮ ಮರದ ಕೆಳಗೆ ಪಾರ್ಕ್ ಮಾಡಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ. ಇಡೀ ರಸ್ತೆಯಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ಇಂದು ಇಡೀ ದಿನ ಈ ರಸ್ತೆ ಸಂಚಾರ ಬಂದ್ ಆಗಿತ್ತು. ಆದಷ್ಟು ಬೇಗ ಮರಗಳನ್ನು ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ರಾಮನಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ
ಯೂನಿವರ್ಸಿಟಿ ಗೇಟ್-R.R.ನಗರ ಆರ್ಚ್ ರಸ್ತೆ ಜಲಾವೃತಗೊಂಡಿದೆ. ರಾತ್ರಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ಜಾಮ್ನಿಂದ ಸವಾರರು ಪರದಾಡುವಂತಾಗಿತ್ತು. ಇನ್ನೂ ಹೆಚ್ಚು ಮಳೆ ಬಂದಿದ್ರೆ ಕಾರುಗಳು ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.
ಒಟ್ನಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ರಾಜಧಾನಿಯಲ್ಲಿ ಮಳೆಯಾಗುವ ಸಂಭವಿದ್ದು, ಸಾರ್ವಜನಿಕರು ಮರದ ಕೆಳಗೆ ರೋಡ್ ಗಳಲ್ಲಿ ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಇರುವುದು ಬಹಳ ಒಳಿತು. ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:07 am, Sat, 11 May 24