ಬೆಂಗಳೂರು ಮಹಾಜನತೆ ಗಮನಕ್ಕೆ: ಈ ರೋಡ್‌ನಲ್ಲಿ ಸಂಚರಿಸುವ ಮುನ್ನ ಯೋಚಿಸಿ; 1 ಗಂಟೆಯ ಜರ್ನಿ ಇನ್ಮುಂದೆ 2 ಗಂಟೆ!

ಬೆಂಗಳೂರಿನ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯಲ್ಲಿ 378 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಇದರಿಂದ ಸುಮಾರು 9 ತಿಂಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಲಿದ್ದು, 1 ಗಂಟೆ ಪ್ರಯಾಣ 2 ಗಂಟೆಗೆ ಹೆಚ್ಚಲಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳು ಮತ್ತು ಮೆಟ್ರೋ ಬಳಸುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು ಮಹಾಜನತೆ ಗಮನಕ್ಕೆ: ಈ ರೋಡ್‌ನಲ್ಲಿ ಸಂಚರಿಸುವ ಮುನ್ನ ಯೋಚಿಸಿ; 1 ಗಂಟೆಯ ಜರ್ನಿ ಇನ್ಮುಂದೆ 2 ಗಂಟೆ!
ಸಾಂದರ್ಭಿಕ ಚಿತ್ರ
Image Credit source: AI image

Updated on: May 22, 2026 | 9:19 AM

ಬೆಂಗಳೂರು, ಮೇ.22: ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಹಾಗೂ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯಲ್ಲಿ (ORR) ದೊಡ್ಡ ಮಟ್ಟದ ಬದಲಾವಣೆ ಕಾಣಲಿದೆ. ಈ ವ್ಯಾಪ್ತಿಯ 17.1 ಕಿಲೋಮೀಟರ್ ಉದ್ದದ ಅಸ್ತಿತ್ವದಲ್ಲಿರುವ ಡಾಂಬರು ರಸ್ತೆಯನ್ನು ತೆಗೆದು, ಹೆಚ್ಚು ಬಾಳಿಕೆ ಬರುವ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮತ್ತು ಸರ್ಕಾರ ನಿರ್ಧರಿಸಿದೆ. ಬರೋಬ್ಬರಿ 378 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಟ್ರಾಫಿಕ್‌ನಲ್ಲಿ ಸಿಲುಕಲಿವೆ 450ಕ್ಕೂ ಹೆಚ್ಚು ಐಟಿ ಕಂಪನಿಗಳು!

ಈ ಹೊರವರ್ತುಲ ರಸ್ತೆಯ ಕಾರಿಡಾರ್‌ನಲ್ಲಿ ನಿತ್ಯ 23 ಟೆಕ್ ಪಾರ್ಕ್‌ಗಳು ಹಾಗೂ 450ಕ್ಕೂ ಹೆಚ್ಚು ಪ್ರಮುಖ ಐಟಿ ಕಂಪನಿಗಳ ನೌಕರರು ಸೇರಿದಂತೆ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ರಸ್ತೆಯ ಮುಖ್ಯ ಕ್ಯಾರಿಯೇಜ್ ವೇ ನಲ್ಲಿ 190 ಎಂಎಂ ದಪ್ಪದ ಕಾಂಕ್ರೀಟ್ ಮೇಲ್ಮೈ ನಿರ್ಮಿಸಲಾಗುತ್ತಿದ್ದು, ಜೊತೆಗೆ ಸರ್ವಿಸ್ ರಸ್ತೆಗಳ ಪುನರ್ನಿರ್ಮಾಣ, ಚರಂಡಿ ಮೇಲ್ದರ್ಜೀಕರಣ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯನ್ನು ಪೂರ್ಣಗೊಳಿಸಲು 1 ವರ್ಷದ ಗಡುವು ನೀಡಲಾಗಿದ್ದರೂ, ಅಧಿಕಾರಿಗಳು ಇದನ್ನು 9 ತಿಂಗಳಲ್ಲೇ ಮುಗಿಸಲು ಪ್ಲಾನ್​ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಈ ಭಾಗದಲ್ಲಿ ಸಂಚಾರ ನರಕಸದೃಶವಾಗಲಿದೆ.

ಯಾವೆಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲಿ ಭಾರಿ ಸಂಚಾರ ದಟ್ಟಣೆ?:

ಕಾಮಗಾರಿ ಆರಂಭವಾದರೆ ಪ್ರಸ್ತುತ 45 ನಿಮಿಷ ತೆಗೆದುಕೊಳ್ಳುವ ಪ್ರಯಾಣದ ಅವಧಿ 90 ನಿಮಿಷಕ್ಕೆ ಹಾಗೂ 1 ಗಂಟೆಯ ಪ್ರಯಾಣ 2 ಗಂಟೆಗೂ ಅಧಿಕ ಸಮಯಕ್ಕೆ ವಿಸ್ತರಣೆಯಾಗಲಿದೆ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ. ಮುಖ್ಯವಾಗಿ ಈ ಕೆಳಗಿನ ಹಾಟ್‌ಸ್ಪಾಟ್‌ಗಳು ಕಂಪ್ಲೀಟ್ ಜ್ಯಾಮ್ ಆಗಲಿವೆ.

ಸಿಲ್ಕ್ ಬೋರ್ಡ್ ಜಂಕ್ಷನ್ (Silk Board)

ಎಚ್‌ಎಸ್‌ಆರ್ ಲೇಔಟ್ ಜಂಕ್ಷನ್ (HSR Layout)

ಅಗ್ರ ಜಂಕ್ಷನ್ (Agara)

ಇಬ್ಲೂರು ಜಂಕ್ಷನ್ (Iblur)

ಮಾರತ್‌ಹಳ್ಳಿ ಜಂಕ್ಷನ್ (Marathahalli)

ಕೆ.ಆರ್. ಪುರಂ ರಸ್ತೆ (KR Pura)

ವಾಹನ ಸವಾರರಿಗೆ ಬರ್ಯಾಯ ರಸ್ತೆಗಳ ಆಯ್ಕೆ:

ಟ್ರಾಫಿಕ್ ಸಂಕಷ್ಟದಿಂದ ಪಾರಾಗಲು ಸಾರ್ವಜನಿಕರು ಹಾಗೂ ಟೆಕ್ಕಿಗಳು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

ಸರ್ಜಾಪುರ ರಸ್ತೆ (Sarjapur Road)

ಇಂಟರ್ ಮೀಡಿಯೆಟ್ ರಿಂಗ್ ರೋಡ್ (IRR)

ಹೊಸೂರು ರಸ್ತೆ ಕಾರಿಡಾರ್ (Hosur Road)

ಬೆಂಗಳೂರಿನ ಒಳಗಿನ ಲಿಂಕ್ ರಸ್ತೆಗಳು

ನಮ್ಮ ಮೆಟ್ರೋ (Namma Metro) ಮತ್ತು ಫೀಡರ್ ಬಸ್‌ಗಳ ಸೌಲಭ್ಯ.

ಇದನ್ನೂ ಓದಿ: ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಐಟಿ ಕಂಪನಿಗಳ ಒಕ್ಕೂಟ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಹಾಗೂ ಆಫೀಸ್ ಸಮಯದ ಬದಲಾವಣೆ ಕುರಿತು ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಡೈವರ್ಷನ್ ಪ್ಲಾನ್ ಪ್ರಕಟಿಸಲಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:17 am, Fri, 22 May 26

Follow Us