ಅವಧಿ ಮೀರಿದ, ಮಿಸ್‌ಬ್ರ್ಯಾಂಡೆಡ್ ಆಹಾರ ಪತ್ತೆ: ಬೆಂಗಳೂರು ವ್ಯಾಪ್ತಿಯ 23 ಪಿಜಿಗಳಿಗೆ ನೋಟಿಸ್

ಬೆಂಗಳೂರು ವ್ಯಾಪ್ತಿಯ 64 ಪಿಜಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಹಾಗೂ ಮಿಸ್‌ಬ್ರ್ಯಾಂಡೆಡ್ ಆಹಾರ ಪತ್ತೆಯಾಗಿದೆ. ಬೊಮ್ಮಸಂದ್ರದ ನಂದನ ಎಲೈಟ್​​ ಪಿಜಿಯ ಡೈನಿಂಗ್ ಏರಿಯಾ ಸೀಲ್ ಮಾಡಲಾಗಿದೆ. ಒಟ್ಟು 23 ಪಿಜಿಗಳಿಗೆ ನೋಟಿಸ್ ನೀಡಲಾಗಿದೆ. ಪಿಜಿಗಳ ಮೇಲೂ ದಾಳಿ ನಡೆಸುವುದಾಗಿ ಕೆಲವು ದಿನಗಳ ಹಿಂದೆ ಸಚಿವ ಯುಟಿ ಖಾದರ್ ಹೇಳಿದ್ದರು.

ಅವಧಿ ಮೀರಿದ, ಮಿಸ್‌ಬ್ರ್ಯಾಂಡೆಡ್ ಆಹಾರ ಪತ್ತೆ: ಬೆಂಗಳೂರು ವ್ಯಾಪ್ತಿಯ 23 ಪಿಜಿಗಳಿಗೆ ನೋಟಿಸ್
ಬೆಂಗಳೂರು ವ್ಯಾಪ್ತಿಯ 23 ಪಿಜಿಗಳಿಗೆ ನೋಟಿಸ್
Image Credit source: tv9
Edited By:

Updated on: Sep 05, 2026 | 10:25 AM

ಮುಖ್ಯಾಂಶಗಳು

  • 64 ಪಿಜಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ
  • ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ
  • 23 ಪಿಜಿಗಳಿಗೆ ಅಧಿಕಾರಿಗಳಿಂದ ನೋಟಿಸ್ ಜಾರಿ

ಬೆಂಗಳೂರು, ಸೆಪ್ಟೆಂಬರ್ 5: ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಅನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಾರ್ಯಾಚರಣೆ ನಡೆಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಪ್ರದೇಶಗಳಲ್ಲಿ ಒಂದೇ ದಿನ 64 ಪಿಜಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಸಚಿವ ಯುಟಿ ಖಾದರ್ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆ ವಿಧಾನಗಳನ್ನು ಪರಿಶೀಲಿಸಲಾಗಿದೆ. ಅಡುಗೆಮನೆಯ ನೈರ್ಮಲ್ಯ, ಆಹಾರ ತಯಾರಿಕಾ ಸ್ಥಳಗಳ ಸ್ವಚ್ಛತೆ, ಕಚ್ಚಾ ವಸ್ತುಗಳ ಗುಣಮಟ್ಟ ಮತ್ತು ಸಂಗ್ರಹಣಾ ವಿಧಾನಗಳನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಅವಧಿ ಮೀರಿದ ಹಾಗೂ ಮಿಸ್‌ಬ್ರ್ಯಾಂಡೆಡ್ ಆಹಾರ ಪದಾರ್ಥಗಳು ಪತ್ತೆ

ತಪಾಸಣೆ ವೇಳೆ ಕೆಲವು ಪಿಜಿಗಳಲ್ಲಿ ಅವಧಿ ಮೀರಿದ ಹಾಗೂ ಮಿಸ್‌ಬ್ರ್ಯಾಂಡೆಡ್ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅವಧಿ ಮೀರಿದ ಮೊಸರು, ಸ್ವಸ್ತಿಕ್ ಬಿಸಿಬೇಳೆ ಬಾತ್ ಪೌಡರ್, ರೈಸ್ ಫ್ಲೋರ್, ಸಿಂಥೆಟಿಕ್ ಫುಡ್ ಕಲರ್, ಕಾಳುಮೆಣಸು ಹಾಗೂ ಮಿಸ್‌ಬ್ರ್ಯಾಂಡೆಡ್ ಮಿಶ್ರಣ ಸೇರಿದಂತೆ ಹಲವು ಪದಾರ್ಥಗಳನ್ನು ನಿಯಮಬಾಹಿರವಾಗಿ ಬಳಸುತ್ತಿರುವುದು ಪತ್ತೆಯಾಗಿದೆ.

ಇದರ ಜೊತೆಗೆ ಆಹಾರ ಪದಾರ್ಥಗಳ ತಯಾರಿಕೆ ಮತ್ತು ಬಳಕೆ ಅವಧಿ, ಆಹಾರ ಉತ್ಪನ್ನಗಳ ಲೇಬಲಿಂಗ್ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೊಮ್ಮಸಂದ್ರದ ಪಿಜಿಯಲ್ಲಿ ಗಂಭೀರ ಅಸಡ್ಡೆ

ಬೊಮ್ಮಸಂದ್ರದ ನಂದನ ಎಲೈಟ್ ಪಿಜಿಯಲ್ಲಿ ತಪಾಸಣೆ ನಡೆಸಿದ ವೇಳೆ ಗಂಭೀರ ಅಸಡ್ಡೆ ಕಂಡುಬಂದಿದೆ. ಊಟದ ಮೇಜಿನ ಮೇಲೆಯೇ ಆಹಾರ ಪದಾರ್ಥಗಳ ಜೊತೆಗೆ ತಿಗಣೆ ನಿವಾರಣೆಗೆ ಬಳಸುವ ಪೌಡರ್ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಸ್ಥಳದಲ್ಲೇ ಆಹಾರಕ್ಕೆ ಸಂಬಂಧಿಸದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಆಹಾರ ಮತ್ತು ಇತರೆ ವಸ್ತುಗಳನ್ನು ಸೂಕ್ತವಾಗಿ ಪ್ರತ್ಯೇಕಿಸದೆ ಇಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲೇ ಕ್ರಮ ಕೈಗೊಂಡಿದ್ದಾರೆ.

ನಿಯಮ ಉಲ್ಲಂಘನೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಗಂಭೀರ ಅಸಡ್ಡೆ ಹಿನ್ನೆಲೆಯಲ್ಲಿ ಅಧಿಕಾರಿಗಳು ನಂದನ ಎಲೈಟ್ ಪಿಜಿಯ ಡೈನಿಂಗ್ ಏರಿಯಾವನ್ನು ಸೀಲ್ ಮಾಡಿದ್ದಾರೆ.

23 ಪಿಜಿಗಳಿಗೆ ನೋಟಿಸ್

ಒಟ್ಟು 64 ಪಿಜಿಗಳ ತಪಾಸಣೆ ವೇಳೆ ನೈರ್ಮಲ್ಯ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ 23 ಪಿಜಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಸಿಬ್ಬಂದಿ ಕೊರತೆ ನಡುವೆಯೂ ಕಳಪೆ ಆಹಾರ ವಿರುದ್ಧ ಸಮರ ಸಾರಿರುವ ಆಹಾರ ಸುರಕ್ಷತಾ ಇಲಾಖೆ ಮೇಲೆ ಈಗ ಜನರಿಗೂ ಸಿಟ್ಟು! ಯಾಕೆ ಗೊತ್ತೇ?

ಪಿಜಿಗಳಲ್ಲಿ ವಾಸಿಸುವವರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಕಡ್ಡಾಯವಾಗಿದ್ದು, ಆಹಾರ ತಯಾರಿಕೆ ಮತ್ತು ಸಂಗ್ರಹಣೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಹಾರ ಸುರಕ್ಷತಾ ಇಲಾಖೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us