ಬೆಂಗಳೂರು, ಆಗಸ್ಟ್ 1: ಕೊರಮಂಗಲದಲ್ಲಿ ನಡೆದಿದ್ದ ಕೃತಿ ಕುಮಾರಿ ಕೊಲೆ ಪ್ರಕರಣ ಇಡಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಹಂತಕನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯ ಎಂಥರ ಎದೆಯನ್ನೂ ಝಲ್ ಎನ್ನಿಸುವಂತಿತ್ತು. ಆದರೆ, ಇದರ ನಡುವೆ, ಅದೊಂದು ಅವ್ಯವಸ್ಥೆ ಆ ದೃಶ್ಯದ ಮುಖಾಂತರ ಕಂಡು ಬಂದಿತ್ತು. ಏನೆಂದರೆ, ಮಹಿಳಾ ಪಿಜಿಗೆ ಅಷ್ಟು ಸಲಿಸಾಗಿ ವ್ಯಕ್ತಿ ಹೇಗೆ ಒಳಬರಲು ಸಾಧ್ಯ? ಅಲ್ಲಿನ ಯುವತಿಯರ ಭದ್ರತೆ ಹೇಗಿತ್ತು ಎಂಬುದು. ಈ ಪ್ರಶ್ನೆ ಈಗ ನಗರ ಪೊಲೀಸ್ ಆಯುಕ್ತರಿಂದ ಬಂದಿದೆ. ಕೇವಲ ಒಂದು ಪಿಜಿಯಲ್ಲ, ನಗರದ ಎಲ್ಲಾ ಪಿಜಿಗಳ ಡೇಟಾ ಸಂಗ್ರಹಿಸುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೂಚನೆ ನೀಡಿದ್ದಾರೆ.
ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದು, ಪ್ರತಿಯೊಂದು ಪಿಜಿಯ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಎಲ್ಲಾ ಪಿಜಿಗಳ ಗುರುತಿಸುವುದರ ಜೊತೆಗೆ ಪಿಜಿಯವರು ಪಾಲಿಸಬೇಕಾದ ಹಾಗೂ ಪೊಲೀಸರು ಕ್ರಮಕೈಗೊಳ್ಳಬೇಕಾದ ಒಟ್ಟು 13 ಅಂಶಗಳ ಮಾರ್ಗಸೂಚಿ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪರಿಶೀಲನೆಗೆ ಮುಂದಾದ ಪೊಲೀಸರಿಗೆ ನಗರದಲ್ಲಿ ಅನಧಿಕೃತ ಪಿಜಿಗಳು ಹೆಚ್ಚಾಗಿರುವುದು ಗೊತ್ತಾಗಿದೆ. ಇದು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಟ್ಟಿಕೊಂಡಿರುವ ಪಿಜಿಗಳಾಗಿದ್ದು, ಇದರ ಸಂಬಂಧ ಬಿಬಿಎಂಪಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್
ಒಟ್ಟಾರೆ ಪೊಲೀಸರ ಈ ಹೊಸ ನಿಯಮಗಳು ಮುಂದಿನ ದಿನಗಳ ಯಾವ ರೀತಿ ಜಾರಿಯಾಗಲಿದೆ? ಪಿಜಿಗಳಲ್ಲಿ ಸುರಕ್ಷತಾ ಕ್ರಮ ಎಷ್ಟರ ಮಟ್ಟಿಗೆ ಇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ