ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್, ಎಂಜಿನಿಯರಿಂಗ್ ಅದ್ಭುತ ಎಂದ ನೆಟ್ಟಿಗರು
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಪ್ರವಾಹದೋಪಾದಿಯಲ್ಲಿ ನೀರು ಹರಿದ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೋಮವಾರದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಕಳಪೆ ಕಾಮಗಾರಿ ಮತ್ತು ಒಳಚರಂಡಿ ವ್ಯವಸ್ಥೆಯ ವೈಫಲ್ಯವನ್ನು ಬಿಂಬಿಸಿದೆ. 30 ನಿಮಿಷಗಳ ಮಳೆಯಲ್ಲಿಯೇ ಫ್ಲೈಓವರ್ ನೀರಿನಿಂದ ತುಂಬಿಹೋಗಿರುವುದಕ್ಕೆ ಸಾರ್ವಜನಿಕರಿಂದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 2: ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿಯ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ (Bengaluru Rain) ಈಜುಕೊಳದಂತಾಗಿದ್ದು, ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕಳಪೆ ಕಾಮಗಾರಿ, ಆಡಳಿತದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ. ಫ್ಲೈಓವರ್‌ನಲ್ಲಿ ಪ್ರವಾಹದ ರೀತಿಯ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನಗರದ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಡಬಲ್ ಡೆಕ್ಕರ್ ಫ್ಲೈಓವರ್ ವಿನ್ಯಾಸ ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಜಾಗದಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗುತ್ತಿದೆ. ಇಲ್ಲಿ ಸರಿಯಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಿಲ್ಲ. ಚರಂಡಿಗಳು ಒಂದು ಬದಿಯಲ್ಲಿ ಮಾತ್ರ ಇವೆ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಪ್ರವಾಹ: ವಿಡಿಯೋ ನೋಡಿ
Double Decker Flyover Towards Silkboard. @NammaBengaluroo @namma_vjy @ChristinMP_ pic.twitter.com/poqeBbO0tN
— Atul Sharma 🇮🇳 (@atul_sharma91) September 1, 2025
‘‘ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ 30 ನಿಮಿಷಗಳ ಮಳೆಗೆ ನೀರು ತುಂಬಿ ಹರಿಯುತ್ತದೆ. ಫ್ಲೈಓವರ್ ಹೇಗೆ ಪ್ರವಾಹಕ್ಕೆ ತುತ್ತಾಗುತ್ತದೆ? ಇದೊಂದು ಎಂಜಿನಿಯರಿಂಗ್ ಅದ್ಭುತ’’ ಎಂದು ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ. 30 ನಿಮಿಷಗಳ ಮಳೆ ಮತ್ತು ಬೆಂಗಳೂರಿನ ಡಬಲ್ ಡೆಕ್ ಫ್ಲೈಓವರ್ ಈಜುಕೊಳವಾಗಿ ಬದಲಾಗುವುದು ಹೇಗೆಂಬುದನ್ನು ಇಲ್ಲಿ ನೋಡಬಹುದು ಎಂದು ಮತ್ತೊಬ್ಬರು ಕುಹಕವಾಡಿದ್ದಾರೆ.
ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ವಿಸ್ತರಿಸಿರುವ 5.12 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್, ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಕಮ್ ರಸ್ತೆ ಸಂರಚನೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಫ್ಲೈಓವರ್, ಕೆಳಗಿನ ಡೆಕ್‌ನಲ್ಲಿ ನಾಲ್ಕು ಪಥಗಳ ರಸ್ತೆ ಸಂಚಾರವನ್ನು ಹೊಂದಿದೆ ಮತ್ತು ನಮ್ಮ ಮೆಟ್ರೋ ಹಳದಿ ಮಾರ್ಗವು ಮೇಲೆ ಚಲಿಸುತ್ತದೆ.
ಈ ಫ್ಲೈಓವರ್ 2024 ರ ಜುಲೈನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ. ಈ ಫ್ಲೈಓವರ್ ಬೆಂಗಳೂರಿನ ಅತ್ಯಂತ ಜನನಿಬಿಡ ಸಂಚಾರ ಜಂಕ್ಷನ್‌ಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿತ್ತು. ಆದಾಗ್ಯೂ, ಎಚ್‌ಎಸ್‌ಆರ್ ಲೇಔಟ್, ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್ ಅನ್ನು ಸಂಪರ್ಕಿಸುವ 1.37 ಕಿಮೀ ಉದ್ದದ ಪ್ರಮುಖ ಸಂಪರ್ಕ ರ‍್ಯಾಂಪ್‌ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಸೋಮವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯು ಫ್ಲೈಓವರ್‌ನ ಒಳಚರಂಡಿ ಸಮಸ್ಯೆಗಳನ್ನು ಬಹಿರಂಗಪಡಿಸಿತು.
ಇದನ್ನೂ ಓದಿ: ಇಂದಿನಿಂದ ಗ್ರೇಟರ್ ಬೆಂಗಳೂರು ಅಥಾರಿಟಿ: ದಶಕಗಳ ಇತಿಹಾಸ ಹೊಂದಿದ್ದ ಬಿಬಿಎಂಪಿ ಇನ್ಮುಂದೆ ನೆನಪು
ಸೋಮವಾರ ಸಂಜೆ ಬೆಂಗಳೂರಿನ ವಿವಿಧೆಡೆ ಭಾರಿ ಮಳೆಯಾಗಿದೆ. ವಿದ್ಯಾಪೀಠದಲ್ಲಿ 34.5 ಮಿ.ಮೀ., ಕೆಂಗೇರಿಯಲ್ಲಿ 33 ಮಿ.ಮೀ. ಮತ್ತು ರಾಜರಾಜೇಶ್ವರಿನಗರದಲ್ಲಿ 32 ಮಿ.ಮೀ. ಮಳೆಯಾಗಿದೆ. ಬೆಂಗಳೂರಿನ ಇತರ ಭಾಗಗಳಲ್ಲಿ 10–30 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.




