ಬೆಂಗಳೂರಿನ ಹಲವೆಡೆ ಮಳೆ: ದಿಢೀರ್ ಬಂದ ಮಳೆಗೆ ವಾಹನ ಸವಾರರು ಹೈರಾಣು
ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದೆ. ಮೆಜೆಸ್ಟಿಕ್, ವಿಧಾನಸೌಧ ಸೇರಿದಂತೆ ನಗರದ ಹಲವೆಡೆ ಮಳೆ ಆಗಿದೆ. ಏಕಾಏಕಿ ಬಂದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ವಿಧಾನಸೌಧದ ಬಳಿ ಡಾ. ಅಂಬೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಜನರು ಆಶ್ರಯ ಪಡೆದರು. ಇತ್ತ ಹಲವು ಜಿಲ್ಲೆಗಳಲ್ಲಿ ಕೂಡ ಮಳೆ ಆಗಿದೆ.

ಬೆಂಗಳೂರು, ಏಪ್ರಿಲ್ 14: ಮಳೆಗಾಲ ಆರಂಭಕ್ಕೂ ಮುನ್ನವೇ ಮಳೆರಾಯನ (rain) ಆರ್ಭಟ ಶುರುವಾಗಿದೆ. ಕರ್ನಾಟಕದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಇಂದು ಕೂಡ ಬೆಂಗಳೂರು ಸೇರಿದಂತೆ ಕೆಲವೆಡೆ ಮಳೆ ಸುರಿದಿದೆ. ಇಂದು ಬೆಂಗಳೂರಿನಲ್ಲಿ (bangaluru) ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿತ್ತು. ಮಧ್ಯಾಹ್ನದಿಂದ ನಗರದೆಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಇದೀಗ ನಗರದ ಹಲವೆಡೆ ಧಾರಾಕಾರ ಮಳೆ ಆಗಿದೆ.
ಎಲ್ಲೆಲ್ಲಿ ಮಳೆ?
ವಿಧಾನಸೌಧ, ಕೆ.ಆರ್ ಸರ್ಕಲ್, ಕಾರ್ಪೊರೇಷನ್, ಶಾಂತಿ ನಗರ, ಮೆಜೆಸ್ಟಿಕ್, ಮೈಸೂರ್ ಬ್ಯಾಂಕ್, ಟೌನ್ಹಾಲ್, ರಿಚ್ಮಂಡ್ ಟೌನ್, ಜಯನಗರ ಸೇರಿದಂತೆ ಹಲವೆಡೆ ಮಳೆ ಆಗಿದೆ. ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಬಳಿ ಹಾಕಲಾಗಿದ್ದ ಪೆಂಡಾಲ್ ಕೆಳಗೆ ಜನರು ಆಶ್ರಯ ಪಡೆದಿದ್ದಾರೆ. ಇನ್ನು ರಜೆ ಹಿನ್ನಲೆ ವಿಧಾನಸೌಧ, ಕಬ್ಬನ್ ಪಾರ್ಕ್ ನೋಡಲು ಬಂದಿದ್ದ ಸಾರ್ವಜನಿಕರು ಮಳೆಯಿಂದ ಪರದಾಡಿದರು.
ಹಾಸನದಲ್ಲಿ ಭಾರಿ ಮಳೆ: ಧರೆಗುರುಳಿದ ಮರಗಳು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ, ಹರಗರಹಳ್ಳಿ, ವಳಲಹಳ್ಳಿ ಹಾಗೂ ಕರಡಿಗಾಲ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆ ಆಗಿದೆ. ಭಾರಿ ಗಾಳಿ ಮಳೆಯಿಂದ ಹಲವು ಕಡೆ ಮರಗಳು ಧರೆಗುರುಳಿವೆ. ಚಿಕ್ಕಮಗಳೂರು ಭಾಗದಲ್ಲಿ ಕೂಡ ಭಾರಿ ಮಳೆ ಆಗಿದೆ. ಕೊಪ್ಪ, ಕಳಸ, ಮೂಡಿಗೆರೆ ತಾಲೂಕಿನಲ್ಲಿ ಮಳೆ ಅಬ್ಬರಿಸಿದೆ.
ಇದನ್ನೂ ಓದಿ: Karnataka Weather: ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯ ಮುನ್ಸೂಚನೆ
ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಅವಾಂತರಗಳು ಸೃಷ್ಟಿಯಾಗಿದ್ದು, ಕಳಸ ತಾಲೂಕಿನ ಹಳುವಳ್ಳಿ ಬಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದಿದ್ದೆ. ಹೊರನಾಡು ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಸದ್ಯ ಮಳೆ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ.
ಕೊಡಗಿನಲ್ಲಿ ಆಲಿಕಲ್ಲು ಮಳೆ: ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ
ಕೊಡಗು ಜಿಲ್ಲೆಯ ಹಲವೆಡೆ ಕೂಡ ಧಾರಾಕಾರ ಮಳೆ ಆಗಿದೆ. ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ ತಾಲೂಕಿನ ಮರಗೋಡು, ಕತ್ತಲೆಕಾಡು, ಹೊಸ್ಕೇರಿ, ಮೂರ್ನಾಡು, ಕೊಂಡಂಗೇರಿ ಸುತ್ತಮುತ್ತ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಉತ್ತಮ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Mon, 14 April 25