
ಬೆಂಗಳೂರು, ಜನವರಿ 23: ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು (Bangalore Traffic) ಎರಡನೇ ಸ್ಥಾನ ಪಡೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ (Traffic Index) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯದ ಒತ್ತಡ ಹಾಗೂ ನಿರಂತರ ಕಾಮಗಾರಿಗಳು ಸಂಚಾರ ಸಮಸ್ಯೆ ಮತ್ತಷ್ಟು ತೀವ್ರಗೊಳಿಸುತ್ತಿವೆ ಎನ್ನಲಾಗಿದೆ.
ವಾಹನ ಸಂಚಾರದ ಸರಾಸರಿ ವೇಗದಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದೆ. 2024ರಲ್ಲಿ ಗಂಟೆಗೆ 16.6 ಕಿಲೋಮೀಟರ್ ಇದ್ದ ಸರಾಸರಿ ವೇಗ, 2025ರಲ್ಲಿ 17.6 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಆದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ. 2025ರಲ್ಲಿ 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಸಂಚರಿಸಬಹುದಾಗಿದ್ದು, 2024ರಲ್ಲಿ ಇದು 4.2 ಕಿಲೋಮೀಟರ್ ಆಗಿತ್ತು.
ಬೆಂಗಳೂರು ನಗರದಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ. ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಚಾರ ದಟ್ಟಣೆ ಪಟ್ಟಿಯಲ್ಲಿ ದುಬೈ ಮೂರನೇ ಸ್ಥಾನದಲ್ಲಿದ್ದು, ಪೊಲ್ಯಾಂಡ್‌ನ ಲೊಡ್ಜ್ ನಗರ ನಾಲ್ಕನೇ ಸ್ಥಾನ ಪಡೆದಿದೆ. ಭಾರತದ ಪುಣೆ ನಗರ ಐದನೇ ಸ್ಥಾನದಲ್ಲಿದ್ದರೆ, ಮುಂಬೈ 18ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು
ಬೆಂಗಳೂರು ವಿಶ್ವದ ಪ್ರಮುಖ ಐಟಿ ನಗರವಾಗಿರುವುದರ ಜೊತೆಗೆ, ಸಂಚಾರ ದಟ್ಟಣೆಯಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಗರಾಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆಯ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.