ಬೆಂಗಳೂರು ಕಾಲ್ತುಳಿತ: ಎಫ್ಐಆರ್​ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಇಡೀ ಘಟನೆಗೆ ಈ ಮೂರು ಸಂಸ್ಥೆಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣ ಅಂತ ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಗಿರೀಶ್ ದೂರು ನೀಡಿದ್ದು, ಕೊನೆಗೂ ಎಫ್​ಐಆರ್​ ದಾಖಲಾಗಿದೆ. ಹಾಗಾದರೆ ಎಫ್​ಐಆರ್​ನಲ್ಲಿ ಏನಿದೆ ಬಂದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಕಾಲ್ತುಳಿತ: ಎಫ್ಐಆರ್​ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಕಾಲ್ತುಳಿತ ಕೇಸ್​

Updated on: Jun 06, 2025 | 1:38 PM

ಬೆಂಗಳೂರು, ಜೂನ್​ 06: ಆರ್​​ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತ ದುರಂತದಲ್ಲಿ 11 ಆರ್‌ಸಿಬಿ (RCB) ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಈ ದುರಂತ ರಾಷ್ಟ್ರದೆಲ್ಲೆಡೆ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್ (FIR)​ ದಾಖಲಿಸಿದ್ದು, ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಸರ್ಕಾರವೂ ಎಚ್ಚೆತ್ತುಕೊಂಡಿದ್ದು, ತನಿಖೆಯನ್ನ ಸಿಐಡಿ ಹೆಗಲಿಗೆ ಹಾಕಿದೆ. ಹಾಗಾದರೆ ಪ್ರಕರಣದಲ್ಲಿ ಆರೋಪಿತರು ಯಾರು? ಎಫ್​ಐಆರ್​ನಲ್ಲಿ ಏನಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್​ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ ಇದೇ ಖುಷಿಯನ್ನ ಐತಿಹಾಸಿಕ ಕ್ಷಣವಾಗಿ ಮಾಡಲು ಹೋದ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ಒಂದು ಕಡೆ ತಮ್ಮವರನ್ನ ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೀತಿದ್ದರೆ, ಇತ್ತ ಕಾಲ್ತುಳಿತದಲ್ಲಿ 11 ಜನರ ಸಾವು ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ಸಂಕಷ್ಟ ತಂದೊಡ್ಡಿದೆ.

ಕೊನೆಗೂ FIR ದಾಖಲು

ಬೆಂಗಳೂರಿನಲ್ಲಿ ನಡೆದ ಘೋರ ಕಾಲ್ತುಳಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಷ್ಟು ದೊಡ್ಡ ದುರಂತ ನಡೆದರೂ ಪೊಲೀಸರು ಇದು ಅಸಹಜ ಸಾವು ಅಂತಾ ಷರಾ ಬರೆದು ಕೈತೊಳೆದುಕೊಂಡಿದ್ದರು. ಯಾರ ವಿರುದ್ಧವೂ ಎಫ್​ಐಆರ್​ ದಾಖಲಿಸಿರಲಿಲ್ಲ. ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಗಿರೀಶ್ ದೂರು ಹಿನ್ನೆಲೆ ಬಿಎನ್​ಎಸ್​ ಸೆಕ್ಷನ್ 105, 115, 118ರಡಿ ಮೊಕದ್ದಮೆ ದಾಖಲಾಗಿದ್ದು, ಆರ್​ಸಿಬಿ ಮ್ಯಾನೇಜ್ಮೆಂಟ್ A-1 ಆಗಿದ್ದರೆ, ಕಾರ್ಯಕ್ರಮ ಆಯೋಜನೆ ಮಾಡಿದ್ದ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ A-2 ಆಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ನ A3 ಯನ್ನಾಗಿ ಮಾಡಿ ಎಫ್​ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ
ಬೆಂಗಳೂರು ಕಾಲ್ತುಳಿತ: ವಿಪಕ್ಷಗಳು ಎತ್ತಿದ ಸಾಲು ಪ್ರಶ್ನೆಗಳು ಇಲ್ಲಿವೆ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ಸರ್ಕಾರ ಸ್ಥಿಮಿತ ತಪ್ಪಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಭಾಸ್ಕರ ರಾವ್
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ

ಇದನ್ನೂ ಓದಿ: Bengaluru Stampede: ಪೊಲೀಸರು ಯಾಕೆ ಬಲಿಪಶು ಅಂತ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಂಮಜಸ ಉತ್ತರ

ಜೂನ್ 4ರಂದು ಯಾವುದೇ ಪೂರ್ವ ತಯಾರಿ ಇಲ್ಲದೆ RCB ಮ್ಯಾನೇಜ್ಮೆಂಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಫ್ಯಾನ್ಸ್ ಮೀಟ್ ಕಾರ್ಯಕ್ರಮವನ್ನ ಆಯೋಜನೆ ಮಾಡಿತ್ತು. ಪರಿಣಾಮ ನಿರೀಕ್ಷೆಗೂ ಮೀರಿ ಜನ ಸಾಗರವೇ ಹರಿದು ಬಂದಿತ್ತು. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ 11 ಮಂದಿ ಜೀವ ಕಳೆದುಕೊಳ್ಳುವಂತಾಯ್ತು. ಈ ಘೋರ ದುರಂತಕ್ಕೆ ಸರ್ಕಾರ ಪೊಲೀಸ್ ಇಲಾಖೆಯನ್ನೇ ಹೊಣೆಯನ್ನಾಗಿ ಮಾಡಿದೆ. ಇತ್ತ ಆರ್​​ಸಿಬಿ, ಡಿಎನ್​​​ಎ ಮತ್ತು ಕೆಎಸ್​ಸಿಎ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಎಫ್​ಐಆರ್​ನಲ್ಲಿ ಏನಿದೆ? 

ಜೂನ್ 3ರಂದು ಸಂಜೆ 6 ಗಂಟೆಗೆ KSCA ಎಕ್ಸಿಕ್ಯೂಟಿವ್ ಆಫೀಸರ್ ಶುಭೇಂದು ಘೋಷ್, ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ಸಂಭ್ರಮಾಚರಣೆ ಇರಲಿದೆ. ಇದಕ್ಕೆ ಸೂಕ್ತ ಭದ್ರತೆ ನೀಡುವಂತೆ ಕಬ್ಬನ್ ಪಾರ್ಕ್ ಠಾಣೆಗೆ ಮನವಿ ಪತ್ರ ನೀಡಿದ್ದರು. ಆದರೆ ಅವರ ಮನವಿಯನ್ನು ನಾನು ನಿರಾಕರಿಸಿದರೂ KSCA ಮತ್ತು RCB ಫ್ರಾಂಚೈಸಿ ಒತ್ತಾಯ ಮಾಡಿದ್ದರು‌. ಜೂನ್4 ರಂದು RCB ಫ್ರಾಂಚೈಸಿ ಯಾವುದೇ ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣದಲ್ಲಿ ವಿಜಯೋತ್ಸವ, ವಿಕ್ಟರಿ ಪರೇಡ್ ಬಗ್ಗೆ ಪೋಸ್ಟ್ ಮಾಡಿದ್ದರು. ಇದರಿಂದ ಲಕ್ಷಾಂತರ ಜನ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುವ ಬಗ್ಗೆ ಸೂಚನೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್​​ಗೆ ನಿರ್ಧಾರ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

ಜೂ.4 ರಂದು ಬೆಳಗ್ಗೆ ಸೂಕ್ತ ಬಂದೋಬಸ್ತ್ ನೀಡಲು ಕಮಿಷನರ್ ಅನುಮತಿ ಕೇಳಲಾಗಿತ್ತು. ಎಲ್ಲಾ ಠಾಣೆಗಳ ಸಿಬ್ಬಂದಿಯನ್ನ ಕರೆಸಿ ತುರ್ತಾಗಿ ಸ್ಟೇಡಿಯಂ, ವಿಧಾನಸೌಧದಲ್ಲೂ ಪೊಲೀಸ್ ಭದ್ರತೆ ನೀಡಲಾಗಿತ್ತು. ಪ್ರತ್ಯೇಕ ಪಾರ್ಕಿಂಗ್, ಟ್ರಾಫಿಕ್ ಮ್ಯಾನೇಜ್ಮೆಂಟ್ ಬಗ್ಗೆ ಪ್ಲ್ಯಾನ್ ಮಾಡಲಾಯ್ತು. ನಿಯೋಜಿತ ಸ್ಥಳದಲ್ಲಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದರು. HAL ವಿಮಾನ ನಿಲ್ದಾಣದಿಂದ ಆಟಗಾರರನ್ನು ಭದ್ರತೆಯಲ್ಲಿ ಕರೆತರಲಾಗಿತ್ತು. ಬಳಿಕ ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಭದ್ರತೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ಅವರೇ ನೇರ ಹೊಣೆ ಎಂದ ವಿಪಕ್ಷಗಳು ಎತ್ತಿದ ಸಾಲು ಪ್ರಶ್ನೆಗಳು ಇಲ್ಲಿವೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 5:30ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಸ್ಟೇಡಿಯಂ ಬಳಿ ಲಕ್ಷಾಂತರ ಜನ ಸೇರಿದ್ದರು. ಸ್ಟೇಡಿಯಂ ಒಳಗೆ ಜನರನ್ನ ಬಿಡಲು ಆರ್​​ಸಿಬಿ, ಡಿಎನ್​​​ಎ ಮತ್ತು ಕೆಎಸ್​ಸಿಎ ವಿಫಲವಾಗಿತ್ತು. ನೂಕು ನುಗ್ಗಲು ಶುರುವಾದಾಗ ಪೊಲೀಸರಿಗೆ ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ಬಳಿಕ ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿದೆ. ಡಿಎನ್​​​ಎ ಮತ್ತು ಕೆಎಸ್​ಸಿಎ ನಿರ್ಲಕ್ಷ್ಯ, ಸೃಷ್ಟಿಸಿದ ಗೊಂದಲದಿಂದ ಕಾಲ್ತುಳಿತ ಆಗಿದೆ. ಹೀಗಾಗಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗೆ ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಗಿರೀಶ್ ಕೊಟ್ಟ ದೂರಿನಡಿ ಅದೇ ಠಾಣೆಯಲ್ಲಿ FIR ದಾಖಲಾಗಿದೆ. ಆದರೆ ಇದೇ ಹೊತ್ತಲ್ಲಿ ಸರ್ಕಾರ ಹೈಕೋರ್ಟ್​ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದೆ. ಪ್ರಕರಣದ ತನಿಖೆಯ ಹೊಣೆಯನ್ನ ಸಿಐಡಿಗೆ ನೀಡಿರುವುದಾಗಿ ಹೇಳಿದೆ. ಒಟ್ಟಿನಲ್ಲಿ ಪೊಲೀಸರು ಬೇಡ ಅಂದರೂ ಸಂಭ್ರಮಾಚರಣೆ ಆಯೋಜಿಸಿದ್ದವರಿಗೆ ನಡುಕ ಶುರುವಾಗಿದೆ.

ವರದಿ: ವಿಕಾಸ್ Tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:31 pm, Fri, 6 June 25