ಪರೀಕ್ಷೆ ಬರೆದವರೇ ಬೇರೆ, ನೇಮಕಗೊಂಡವರೇ ಬೇರೆ! ಬೆಂಗಳೂರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ನ ಪರೀಕ್ಷೆಯಲ್ಲಿ ನಡೆದಿದ್ದೇನು?
ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಬಯಲಾಗಿದೆ. ಐಸಿಎಫ್‌ಆರ್‌ಇ ನಡೆಸಿದ ಪರೀಕ್ಷೆಯಲ್ಲಿ 7 ಅಭ್ಯರ್ಥಿಗಳು ಬೇರೆಯವರಿಂದ ಪರೀಕ್ಷೆ ಬರೆಸಿರುವುದು ದಾಖಲೆ ಪರಿಶೀಲನೆ ಮತ್ತು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ. ಇದರ ಹಿನ್ನೆಲೆಯಲ್ಲಿ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು, ಜನವರಿ 17: ಬೆಂಗಳೂರು ನಗರದ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ (Exam Fraud) ಬೆಳಕಿಗೆ ಬಂದಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE) ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಪರೀಕ್ಷೆಗೆ ಬೇರೆ ವ್ಯಕ್ತಿಗಳನ್ನು ಹಾಜರುಪಡಿಸಿ ಪರೀಕ್ಷೆ ಬರೆಸಿದ್ದ 7 ಅಭ್ಯರ್ಥಿಗಳ ಕೃತ್ಯ ಬಹಿರಂಗವಾಗಿದೆ.
ದಾಖಲೆ ಪರಿಶೀಲನೆ ವೇಳೆ ಸಿಕ್ಕಿ ಬಿದ್ದ ಅಬ್ಯರ್ಥಿಗಳು
ನೇಮಕಾತಿ ಪ್ರಕ್ರಿಯೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಡಳಿಯು ಆಂತರಿಕ ತನಿಖೆ ನಡೆಸಿದೆ. ಪರೀಕ್ಷೆ ವೇಳೆ ಹಾಜರಾದ ಅಭ್ಯರ್ಥಿಗಳ ಫೋಟೋಗಳು, ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳು ಹಾಗೂ ನೇಮಕಾತಿ ಸಂದರ್ಭದಲ್ಲಿ ಮತ್ತು ಕೆಲಸಕ್ಕೆ ಸೇರಿದ ಬಳಿಕ ಸಲ್ಲಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅಭ್ಯರ್ಥಿಗಳ ಸಹಿಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿದೆ.
ಪರೀಕ್ಷೆ ವೇಳೆ ಹಾಜರಾದ ವ್ಯಕ್ತಿಗಳು ಮತ್ತು ನೇಮಕಾತಿ ಸಂದರ್ಭದಲ್ಲಿ ದಾಖಲೆ ಸಲ್ಲಿಸಿದ ವ್ಯಕ್ತಿಗಳು ಬೇರೆ ಬೇರೆ ಎಂಬ ಅನುಮಾನ ಬಲವಾದ ಹಿನ್ನೆಲೆಯಲ್ಲಿ, ಎಲ್ಲಾ ದಾಖಲೆಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ, ಏಳು ಅಭ್ಯರ್ಥಿಗಳ ಬದಲಾಗಿ ಬೇರೆ ವ್ಯಕ್ತಿಗಳು ಪರೀಕ್ಷೆ ಬರೆದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಏಳು ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
