ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಸೂಕ್ತ ದಾಖಲೆ ಇಲ್ಲದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿ ಆಗಿದ್ದ ಕಾರನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಸೀಜ್ ಮಾಡಲಾಗಿದೆ. MH 02, BB 2 ಸಂಖ್ಯೆಯ ರೋಲ್ಸ್ ರಾಯ್ಸ್ ಕಾರು ಸೀಜ್ ಆಗಿದ್ದು, ರೋಲ್ಸ್ ರಾಯ್ಸ್ ಕಾರಿಗೆ ಸೂಕ್ತ ದಾಖಲೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಬು ಎಂಬಾತ ಅಮಿತಾಭ್ ಬಚ್ಚನ್ ರಿಂದ 6 ಕೋಟಿಗೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದ. ಈತ ಬಾಬು ಉಮ್ರಾ ಡೆವಲಪರ್ಸ್ ಮಾಲೀಕ ಎಂದು ತಿಳಿದುಬಂದಿದೆ. ಇನ್ನೂ ಸಹ ಕಾರಿನ ಮೂಲ ದಾಖಲಾತಿ ಬದಲಾಗದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಹೆಸರಲ್ಲೇ ಕಾರು ನೋಂದಣಿಯಾಗಿದೆ.
10 ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಪೋರ್ಶ್, ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ಅನೇಕ ಕಾರುಗಳು ಅಧಿಕಾರಿಗಳು ವಶಪಡಿಸಿಕೊಂಡ ಕಾರುಗಳ ಪಟ್ಟಿಯಲ್ಲಿವೆ. ಈ ಕಾರುಗಳನ್ನು ರೋಡ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಲು ಅನ್ಯ ರಾಜ್ಯದಲ್ಲಿ ನೋಂದಣಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನ ಸೂಕ್ತ ದಾಖಲೆಗಳನ್ನು ತಂದು ಕೊಡುವಂತೆ ನೋಟಿಸ್ ನೀಡಲಾಗಿದೆ. ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಕಾರೊಂದೇ ಅಲ್ಲದೇ ಒಟ್ಟು 10 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದಾಖಲೆಗಳಿಲ್ಲದೆ ಐಶಾರಾಮಿ ಕಾರುಗಳು ಓಡಾಡುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್, ಆರ್ಟಿಒ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರು ಜಪ್ತಿ ಮಾಡುವ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: ಕಾಣೆಯಾಗಿದ್ದ ತಂಗಿಯನ್ನು ರಕ್ಷಾ ಬಂಧನದಂದೇ ಅಣ್ಣನಿಗೆ ಹುಡುಕಿಕೊಟ್ಟ ಪೊಲೀಸರು
(Bengaluru Rolls Royce car seized by Police registered in Amitabh Bachchans name)
Published On - 7:25 pm, Sun, 22 August 21