ಕಾಣೆಯಾಗಿದ್ದ ತಂಗಿಯನ್ನು ರಕ್ಷಾ ಬಂಧನದಂದೇ ಅಣ್ಣನಿಗೆ ಹುಡುಕಿಕೊಟ್ಟ ಪೊಲೀಸರು
ದೂರಿನ ಬೆನ್ನುಬಿದ್ದಿದ್ದ ಅಮೃತಹಳ್ಳಿ ಪೊಲೀಸರು ಇದುವರೆಗೆ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದರು.
ಬೆಂಗಳೂರು: ಕಾಣೆಯಾಗಿದ್ದ ತಂಗಿಯನ್ನು ಪತ್ತೆಮಾಡಿದ ಬೆಂಗಳೂರು ಪೊಲೀಸರು ರಕ್ಷಾ ಬಂಧನದಂದೇ ಅಣ್ಣನಿಗೆ ಒಪ್ಪಿಸಿದ ಮಾನವೀಯ ಘಟನೆಯೊಂದು ವರದಿಯಾಗಿದೆ. ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ತನ್ನ ತಂಗಿಯನ್ನು ಅಣ್ಣ ಮನೆಗೆ ಬರಮಾಡಿಕೊಂಡಿದ್ದಾನೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸರೇ ರಕ್ಷಾ ಬಂಧನದಂದು ಕಾಣೆಯಾಗಿದ್ದ ತಂಗಿಯನ್ನು ಅಣ್ಣನಿಗೆ ಹುಡುಕಿಕೊಟ್ಟ ಮಹಾನುಭಾವರು.
ಆಗಸ್ಟ್ 6 ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಿಂದ 46 ವರ್ಷದ ರಿಮಿ ಅಡ್ಡಿ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಹೀಗಾಗಿ ಸೋದರ ವಿವೇಕ ಅಡ್ಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನುಬಿದ್ದಿದ್ದ ಅಮೃತಹಳ್ಳಿ ಪೊಲೀಸರು ಇದುವರೆಗೆ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತಮುತ್ತ ಸೇರಿದಂತೆ , ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿ ತನಿಖೆ ಮುಂದುವರೆಸಿದ್ದರು. ಇದೇ ಹೊತ್ತಿನಲ್ಲಿ ನಾಪತ್ತೆಯಾಗಿದ್ದ ರಿಮಿ ಅಡ್ಡಿ ಇಂದು ಮಾಗಡಿ ಬಳಿ ಪತ್ತೆಯಾಗಿದ್ದರು. ಇಂದೇ ರಕ್ಷಾ ಬಂದನವೂ ಇರುವುದನ್ನು ಅರಿತ ಪೊಲೀಸರು ಅಣ್ಣ ತಂಗಿಯರ ಸಂಬಂಧದ ಮಹತ್ವ ಅರಿತು ಸೋದರ ವಿವೇಕ್ ಅಡ್ಡಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲೇ ಕೇಕ್ ಕತ್ತರಿಸಿ ಅಣ್ಣನ ಕೈಲಿ ರಾಖಿ ಕಟ್ಟಿಸುವ ಮೂಲಕ ರಿಮಿ ಅಡ್ಡಿಯ ಅವರನ್ನು ಅವರ ಅಣ್ಣ ವಿವೇಕ್ ಅಡ್ಡಿ ಅವರನ್ನು ಒಗ್ಗೂಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಸಹೋದರಿಯರ ರಕ್ಷಾ ಬಂಧನ ಬೆಂಗಳೂರು: ಇಂದು ಆಚರಿಸಲ್ಪಡುತ್ತಿರುವ ರಕ್ಷಾ ಬಂಧನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಹೋದರಿಯರು ರಾಖಿ ಕಟ್ಟಿದ್ದಾರೆ. ಅಂದಹಾಗೆ ಮುಖ್ಯಮಂತ್ರಿಗಳಿಗೆ ರಾಖಿ ಕಟ್ಟಿದವರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಉಪ ವಲಯ ಸಂಚಾಲಕರಾದ ಬಿ ಕೆ ಲೀಲಾ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಕ್ಷಾ ಬಂಧನ ಹಬ್ಬದ ಅಂಗವಾಗಿ ರಾಖಿ ಕಟ್ಟಿ ಶುಭ ಕೋರಿದರು. ಮುಖ್ಯಮಂತ್ರಿಗಳ ಆರ್ ಟಿ ನಗರ ನಿವಾಸದಲ್ಲಿ ಲೀಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಖಿ ಕಟ್ಟಿದರು. ರಾಖಿ ಕಟ್ಟಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮ ಕುಮಾರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದನ್ನೂ ಓದಿ:
ಅಫ್ಘಾನಿಸ್ತಾನದ ಮಹಿಳೆಗೆ ಅಮೆರಿಕಾ ಮಿಲಿಟರಿ ವಿಮಾನದಲ್ಲಿ ಹೆರಿಗೆ; ತಾಯಿ, ಮಗು ಇಬ್ಬರೂ ಕ್ಷೇಮ
(Raksha Bandhan 2021 Bengaluru Police found the sister who was missing on Rakhi Festival)
Published On - 6:59 pm, Sun, 22 August 21