ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!

ಬೆಂಗಳೂರಿನ ಕುಖ್ಯಾತ ರೌಡಿ ಸ್ಪಾಟ್ ನಾಗ, ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಸೋಲದೇವನಹಳ್ಳಿಯಲ್ಲಿ ಪೊಲೀಸರು ದಾಳಿ ನಡೆಸಿದಾಗ, ಕಟ್ಟಡದಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ ಸೊಂಟದ ಮೂಳೆಗೆ ಗಂಭೀರ ಗಾಯ ಮಾಡಿಕೊಂಡಿದ್ದಾನೆ. ಆಸ್ಪತ್ರೆಗೆ ದಾಖಲಾಗಿರುವ ಆತನ ವಿರುದ್ಧ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ ಮತ್ತೊಂದು ಪ್ರಕರಣ ದಾಖಲಾಗಿದೆ.

ಪೊಲೀಸರನ್ನ ಕಂಡು ಬಿಲ್ಡಿಂಗ್‌ನಿಂದ ಕೆಳಗೆ ಹಾರಿದ ರೌಡಿ ‘ಸ್ಪಾಟ್ ನಾಗ’; ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಕಿರಾತಕ!
ರೌಡಿ ‘ಸ್ಪಾಟ್ ನಾಗ’

Updated on: May 26, 2026 | 9:04 AM

ಬೆಂಗಳೂರು, ಮೇ.26 : ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿಶೀಟರ್‌ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿ ಸೊಂಟ ಜಾಯಿಂಟ್ ಕಂಪ್ರೆಷನ್ (ಸೊಂಟದ ಮೂಳೆ ಜರುಗುವಿಕೆ) ಆಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡಿರುವ ಆರೋಪಿಯನ್ನು ನಗರದ ಕುಖ್ಯಾತ ರೌಡಿ ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ರೌಡಿ ಸ್ಪಾಟ್ ನಾಗ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈ ನಡುವೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಈತ ರಹಸ್ಯವಾಗಿ ಹೊಸದೊಂದು ಮನೆ ಕಟ್ಟಿಸುತ್ತಿದ್ದ. ಈ ಬಗ್ಗೆ ಪಕ್ಕಾ ಮಾಹಿತಿ ಪಡೆದ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಲು ಈ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಖಾಕಿ ಪಡೆ ಸ್ಥಳಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಸ್ಪಾಟ್ ನಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಹಿಡಿಯಲು ಬಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ, ಅವರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಪೊಲೀಸರಿಗೆ ನೇರವಾಗಿ ಬೆದರಿಕೆ ಹಾಕಿ, ಅಲ್ಲಿಂದ ಎಸ್ಕೇಪ್ ಆಗುವ ಧಾವಂತದಲ್ಲಿ ನಿರ್ಮಾಣ ಹಂತದ ಬಿಲ್ಡಿಂಗ್‌ನ ಮೇಲಿಂದ ಕೆಳಗೆ ಧುಮುಕಿದ್ದಾನೆ.

ಕಟ್ಟಡದಿಂದ ಹಾರಿದ ರಭಸಕ್ಕೆ ಸ್ಪಾಟ್ ನಾಗನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆತನಿಗೆ ಎದ್ದು ಓಡಲು ಸಾಧ್ಯವಾಗಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಿಲ್ಡಿಂಗ್‌ನಿಂದ ಬಿದ್ದ ಕಾರಣ ಆತನ ಸೊಂಟದ ಮೂಳೆ ಜಾಯಿಂಟ್ ಕಂಪ್ರೆಷನ್ (Joint Compression) ಆಗಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲೇ ಆತನಿಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ

ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಪಾಟ್ ನಾಗನ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.

ರಾಜ್ಯದ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us