ಬೆಳಗಾವಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ
ಬೆಳಗಾವಿ ಜಿಲ್ಲೆಯ ರಾಯಬಾಗದ ಹೊರವಲಯದಲ್ಲಿ ರಾಂಗ್ ಸೈಡ್‌ನಿಂದ ಬಂದ ಗೂಡ್ಸ್ ಆಟೋ ಡಿಕ್ಕಿಯಾಗಿ ಬೊಮ್ಮನಾಳ ಗ್ರಾಮದ ಮಹಾಂತೇಶ್, ಅವರ ಪತ್ನಿ ಸಾಕ್ಷಿ ಹಾಗೂ 9 ತಿಂಗಳ ಮಗು ಸಮರ್ಥ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಮಗು ತೀವ್ರ ಗಾಯಗೊಂಡಿದೆ. ಸದ್ಯ ಆಟೋ ಚಾಲಕ ಪರಾರಿಯಾಗಿದ್ದು, ರಾಯಬಾಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ, ಮೇ 26: ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಒಂಬತ್ತು ತಿಂಗಳ ಕಂದಮ್ಮ ಸೇರಿದಂತೆ ತಂದೆ-ತಾಯಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮಾನೆ (27), ಅವರ ಪತ್ನಿ ಸಾಕ್ಷಿ ಮಾನೆ (23) ಹಾಗೂ ಒಂಬತ್ತು ತಿಂಗಳ ಮಗು ಸಮರ್ಥ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತೊಂದು ಮಗುವಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಖ್ಯಾಂಶಗಳು
- ಬೈಕ್‌ಗೆ ಗೂಡ್ಸ್ ಆಟೋ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು.
- ಬೊಮ್ಮನಾಳ ಗ್ರಾಮದಿಂದ ರಾಯಬಾಗಕ್ಕೆ ತೆರಳುವ ರಸ್ತೆಯಲ್ಲಿ ಘಟನೆ.
- ಆಟೋ ಚಾಲಕನ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ.
ಗ್ರಾಮದಲ್ಲಿ ಸೂತಕದ ಛಾಯೆ
ಮಹಾಂತೇಶ್ ಮಾನೆ ಕುಟುಂಬದೊಂದಿಗೆ ಬೊಮ್ಮನಾಳ ಗ್ರಾಮದಿಂದ ಬೈಕ್‌ನಲ್ಲಿ ರಾಯಬಾಗ ಪಟ್ಟಣಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಟ್ಟಣದ ಹೊರವಲಯದ ರಸ್ತೆಯಲ್ಲಿ ಎದುರಿನಿಂದ ಅತಿ ವೇಗವಾಗಿ ಮತ್ತು ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಆಟೋ ಚಾಲಕ ಬೈಕ್‌ಗೆ ನೇರವಾಗಿ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ದಂಪತಿ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಆಟೋ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ರಾಯಬಾಗ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡಿರುವ ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ ಮೂವರು ಅಸುನೀಗಿರುವುದಕ್ಕೆ ಬೊಮ್ಮನಾಳ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಲೆಮರೆಸಿಕೊಂಡಿರುವ ಆಟೋ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




