
ಬೆಂಗಳೂರು, ಫೆಬ್ರವರಿ 13: ಕೆಲ ದಿನಗಳ ಹಿಂದಷ್ಟೇ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಸದ್ದು ಮಾಡಿತ್ತು. ವಾಹನಗಳನ್ನು ತಪಾಸಣೆ ಮಾಡದೇ ಸಾವಿರಾರು ಹೊರ ರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ (ಎಫ್‌ಸಿ) ನೀಡಿರುವುದು ರಾಜ್ಯ ಸಾರಿಗೆ ಇಲಾಖೆ ಗಮನಕ್ಕೆ ಬಂದಿದ್ದಲ್ಲದೇ ಇದೀಗ ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗಗೊಂಡಿದೆ.
ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 10,022 ವಾಹನಗಳಿಗೆ ಕಳೆದ ಆರು ತಿಂಗಳಲ್ಲಿ ಅನಧಿಕೃತವಾಗಿ ಎಫ್‌ಸಿ ನೀಡಲಾಗಿದೆ ಎಂದು ಟಿವಿ9 ಗೆ ದಾಖಲೆಗಳು ದೊರೆತಿದ್ದು, ಈ ಅಕ್ರಮದಲ್ಲಿ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಭಾಗಿಯಾಗಿರುವುದು ದೃಢಪಟ್ಟಿದೆ.
ಕಳೆದ ತಿಂಗಳು ಗುಜರಾತಿನ 41 ಶಾಲಾ ವಾಹನಗಳಿಗೆ ಎಫ್‌ಸಿ ನೀಡುವ ವೇಳೆ ತಪಾಸಣೆ ಮಾಡದೇ ಅನಧಿಕೃತ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ನಿಸಾರ್ ಅಹಮದ್ ಅಮಾನತುಗೊಂಡಿದ್ದರು. ಆದರೆ ಇದೀಗ ಬೆಳಕಿಗೆ ಬಂದ ದಾಖಲೆಗಳ ಪ್ರಕಾರ, ಕೇವಲ 41 ವಾಹನಗಳಷ್ಟೇ ಅಲ್ಲ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ವಾಹನಗಳಿಗೆ ಸಹ ತಪಾಸಣೆ ನಡೆಸದೆ ಎಫ್‌ಸಿ ನೀಡಲಾಗಿದೆ. ಈ ಎಲ್ಲಾ ಅಕ್ರಮಗಳ ಕುರಿತು ವಕೀಲ ನಟರಾಜ್ ಶರ್ಮಾ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅಮಾನತು
ಈ ಪ್ರಕರಣವು ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಹಣದಾಸೆಗೆ ಸಂಬಂಧಿಸಿದ ಅಕ್ರಮ ಕಾರ್ಯಪ್ರವೃತ್ತಿಗಳನ್ನು ಬಹಿರಂಗಪಡಿಸುತ್ತದೆ. ಸಾರಿಗೆ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಬಹುದಾಗಿದೆ ಎಂದು ವಕೀಲರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.