ಬೆಂಗಳೂರು, ಸೆಪ್ಟೆಂಬರ್ 20: ಡೆಂಗ್ಯೂ, ನಿಫಾ, ಮಂಕಿಪಾಕ್ಸ್ ಇತ್ಯಾದಿ ಸೋಂಕುಗಳ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ. ಹಗಲು ವೇಳೆ ಅತಿಯಾದ ಬಿಸಿಲು, ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಚಳಿಯ ವಾತಾವರಣ, ಒಣ ಹವೆಯ ಕಾರಣ ನಗರದಲ್ಲಿ ಚರ್ಮ ಸಂಬಂಧಿತ ರೋಗಗಳು ಮತ್ತು ಸಮಸ್ಯೆಗಳು ಹೆಚ್ಚಾಗಿರುವುದನ್ನು ಚರ್ಮರೋಗ ತಜ್ಞರು ಗಮನಿಸಿದ್ದಾರೆ.
ಅತಿಯಾದ ಶಾಖದ ವಾತಾವರಣವು ಫಂಗಲ್ ಸೋಂಕುಗಳು ಮತ್ತು ದದ್ದುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಔಷಧಿಗಳ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಸೋಪ್ ಮತ್ತು ಸ್ಕ್ರಬ್‌ಗಳನ್ನು ಅತಿಯಾಗಿ ಬಳಸುವುದು ಮತ್ತು ಟ್ರೆಂಡಿ ಆನ್‌ಲೈನ್ ಸ್ಕಿನ್ ಕೇರ್ಗಳನ್ನು ಹೆಚ್ಚಾಗಿ ಉಪಯೋಗಿಸುವುದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಚರ್ಮರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಷ್ಕ ವಾತಾವರಣ ಹೆಚ್ಚಾಗುತ್ತಿದ್ದಂತೆಯೇ ಚರ್ಮ ಸಂಬಂಧಿತ ಸಮಸ್ಯೆ ಹೆಚ್ಚಾಗಿರುವುದನ್ನು ಗಮನಿಸಿರುವುದಾಗಿ ಹಿರಿಯ ಚರ್ಮರೋಗ ತಜ್ಞೆ ಡಾ. ಶ್ವೇತಾ ಗೌಡ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಶುಷ್ಕ ವಾತಾವರಣದಿಂದಾಗಿ ನಿವಾಸಿಗಳು ಒಣ ಚರ್ಮ, ದದ್ದುಗಳು, ತುರಿಕೆ ಮತ್ತಿತರ ಸಮಸ್ಯೆಗಳನ್ನು ಕಾಣುತ್ತಿದ್ದಾರೆ. ಬಿಸಿ ಶವರ್ನ ಅತಿಯಾದ ಬಳಕೆ ಕೂಡ ಈ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಹೀಗಾಗಿ ಮೈಲ್ಡ್ ಶವರ್ ಜೆಲ್‌ಗಳನ್ನು ಬಳಸುವುದು ಮತ್ತು ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಮಾಯಿಶ್ಚರೈಸ್ಗಳನ್ನು ಬಳಸಿ ತೇವಗೊಳಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
ಸೆರಮೈಡ್-ಆಧಾರಿತ ಮಾಯಿಶ್ಚರೈಸರ್‌ಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ರೋಗಲಕ್ಷಣಗಳನ್ನು ಕಡಿಮೆ ಮಾಡಲು ವೈದ್ಯರು ಆಂಟಿಹಿಸ್ಟಮೈನ್‌ಗಳು ಅಥವಾ ಅಲರ್ಜಿಯ ಔಷಧಿಗಳನ್ನು ಶಿಫಾರಸು ಮಾಡಬಹುದು.
ಪಟಾಕಿಗಳಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಚಳಿಗಾಲದ ಸಂದರ್ಭದಲ್ಲಿ ಉಂಟಾಗುವ ಹೆಚ್ಚಿನ ಮಾಲಿನ್ಯ ಕೂಡ ಚರ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜನರು ಬಿಗಿಯಾದ, ದಪ್ಪದ ಬಟ್ಟೆಗಳನ್ನು ಧರಿಸುವುದು ಸೋಂಕುಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂದು ಮತ್ತೊಬ್ಬ ಚರ್ಮರೋಗ ತಜ್ಞ ಡಾ. ಅನಿಲ್ ಅಬ್ರಹಾಂ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಬೇಡಿ
ವೈದ್ಯರ ಸಲಹೆ ಪಡೆಯದೇ ಸಿಕ್ಕ ಸಿಕ್ಕ ಔಷಧ ಸೇವನೆ ಮಾಡುವುದು, ಸ್ವಯಂ ವೈದ್ಯ ಮಾಡಿಕೊಳ್ಳುವುದರ ಬಗ್ಗೆಯೂ ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ