ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರನ್ನು ಇಳಿಸಲು ಮತ್ತು ಕರೆದುಕೊಂಡು ಹೋಗಲು ಬರುವ ವಾಹನಗಳು ಸೋಮವಾರದಿಂದ ಪಾರ್ಕಿಂಗ್ ಶುಲ್ಕ ಕಟ್ಟಲೇಬೇಕಾಗಿದೆ. ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಲ್ಲಿ ಇದೀಗ ಹೊಸ ನಿಯಮ ಜಾರಿಯಾಗಿದೆ. ನಿಲ್ದಾಣದ ಆವರಣದಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ವಾಹನಗಳು ಇದ್ದರೆ ಪಾರ್ಕಿಂಗ್ ಹಣ ನೀಡಬೇಕು. ಹತ್ತು ನಿಮಿಷಗಳ ಒಳಗೆ ಪಿಕ್ ಅಪ್, ಡ್ರಾಪ್ ಮಾಡಿ ಹೋದರೆ ಯಾವುದೇ ಶುಲ್ಕವಿಲ್ಲ. ಹನ್ನೊಂದು ನಿಮಿಷ ಆದರೂ ಹಣ ಪಾವತಿ ಮಾಡಲೇಬೇಕು.
ಒಂದು ವೇಳೆ ಸ್ಟೇಷನ್ ಒಳಗೆ ಬಂದು ಹತ್ತು ನಿಮಿಷಕ್ಕಿಂತ ಹೆಚ್ಚಿನ ಸಮಯ ಆಗುತ್ತದೆ ಎಂದಾದರೆ, ಅಂತಹ ವಾಹನ ಮಾಲೀಕರು ಸ್ಟೇಷನ್ನಲ್ಲಿರುವ ಪಾರ್ಕಿಂಗ್ ಸ್ಟ್ಯಾಂಡ್ನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬಹುದು.
ಈ ಹೊಸ ನಿಯಮದ ಬಗ್ಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ರೈಲ್ವೆ ಅಧಿಕಾರಿಗಳ ಜೊತೆಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ರೈಲ್ವೆ ಇಲಾಖೆಯ ಹೊಸ ನಿಯಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ರೈಲುಗಳು ಬರುವುದಿಲ್ಲ. ಆ ಸಮಯದಲ್ಲಿ ತಂದೆ, ತಾಯಿಯನ್ನು ಕುಟುಂಬಸ್ಥರನ್ನು ಪಿಕ್ ಅಪ್ ಮಾಡಲು ಬಂದಿರುತ್ತೇವೆ. ಅದಕ್ಕೆ ಹಣ ಪಾವತಿ ಮಾಡಬೇಕು ಅಂದರೆ ಹೇಗೆ? ಅದೂ ಕೂಡ ಇಷ್ಟೊಂದು ದುಬಾರಿ ಶುಲ್ಕ ವಿಧಿಸಿದರೆ ಹೇಗೆ? ಇಲ್ಲಿ ದುಡಿದ ದುಡ್ಡನ್ನೆಲ್ಲ ಇವರಿಗೆ ನೀಡಿದರೆ ನಾವು ಜೀವನ ಮಾಡುವುದು ಹೇಗೆ ಎಂದು ಆಟೋ ಚಾಲಕರು ಮತ್ತು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾಹನ ಸವಾರರು ಪ್ರಯಾಣಿಕರನ್ನು, ತಮ್ಮವರನ್ನು ಪಿಕ್ ಅಪ್, ಡ್ರಾಪ್ ಮಾಡಲು ಬರುವ ವೇಳೆ ರೈಲ್ವೆ ಸ್ಟೇಷನ್ನಲ್ಲಿ ಬೇಕಾಬಿಟ್ಟಿ ವಾಹನಗಳನ್ನು ಪಾರ್ಕ್ ಮಾಡಿ ಹೋಗಿ ಬಿಡುತ್ತಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಅದಕ್ಕೆ ಈ ನಿಯಮ ಜಾರಿಗೆ ತರಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ 2 ಪ್ಲಾಟ್ಫಾರ್ಮ್ 92 ದಿನ ಬಂದ್: 44 ರೈಲುಗಳಿಗಿಲ್ಲ ನಿಲುಗಡೆ, ಇಲ್ಲಿದೆ ವಿವರ
ವಾಹನ ಸವಾರರು ಮಾತ್ರ ಈ ರೀತಿಯ ನಿಯಮ ಸರಿಯಲ್ಲ. ಇದರಿಂದ ತೊಂದರೆ ಆಗುತ್ತದೆ. ಹಣ ಪಾವತಿ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ