
ಬೆಂಗಳೂರು, (ಜೂನ್ 08): ಆರ್ ಸಿಬಿ ವಿಜಯೋತ್ಸವದ (RCB victory parade )ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ (Bengaluru stampede Case) ತೀವ್ರ ಸ್ವರೂಪ ಪಡೆದುಕೊಂಡಿದೆ. ಆಯೋಜನೆ ಮಾಡಿದ್ದು KSCA. ತಪ್ಪು ಅವರದ್ದೇ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಸರ್ಕಾರವೇ ಸನ್ಮಾನದ ಪ್ರಸ್ತಾಪ ಮಾಡಿದ್ದು, ಅವರಿಂದಲೇ ಲೋಪವಾಗಿದೆ ಎಂದಯ KSCA ಹೇಳುತ್ತಿದೆ. ಈ ಆರೋಪ ಪ್ರತ್ಯಾರೋಪಗಳ ಮಧ್ಯೆ ಜೀವ ಕಳೆದುಕೊಂಡ 11 ಜನರ ಕುಟುಂಬಗಳು ಕಣ್ಣೀರಿಡುತ್ತಿವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ನ್ಯಾಯಕ್ಕಾಗಿ ಆಗ್ರಹಿಸ್ತಿವೆ. ಹೀಗಾಗಿ, ಕಾಲ್ತುಳಿತದ ಸತ್ಯಶೋಧನೆಗೆ ತನಿಖಾ ತಂಡಗಳು ಇಳಿದಿವೆ. ಈ ನಡುವೆ ಸ್ಫೋಟಕ ಅಂಶವೊಂದು ಬೆಳಕಿಗೆ ಬಂದಿದ್ದು, ಘಟನೆಗೆ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಹೌದು…ವಿಧಾನಸೌಧ ಭದ್ರತಾ ವಿಬಾಗ ಡಿಸಿಪಿ ಜೂನ್ 4ರಂದೇ ಅಪಾಯದ ಎಚ್ಚರಿಕೆ ನೀಡಿದ್ದು, ಇದನ್ನು ಡಿಪಿಆರ್ ಎ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಸಂಭವಿಸು ಮುನ್ನ ವಿಧಾನಸೌಧ ಭದ್ರತಾ ವಿಬಾಗ ಡಿಸಿಪಿ ಅಪಾಯದ ಎಚ್ಚರಿಕೆ ನೀಡಿದ್ದರು. ಡಿಸಿಪಿ ಕರಿಬಸವನ ಗೌಡ ಅವರು ಜೂನ್ 4ರಂದೇ DPRA ಕಾರ್ಯದರ್ಶಿಗೆ ಪತ್ರ ಬರೆದು ಭದ್ರತೆಗೆ ಸಿಬ್ಬಂದಿ ಕೊರತೆ ಸೇರಿದಂತೆ ಅಪಾಯದ ಎಚ್ಚರಿಕೆ ನೀಡಿದ್ದರು.
ಜೂನ್ 3ರಂದು ಕೆಎಸಿಎ ಅನುಮತಿ ಕೇಳಿ ಡಿಪಿಆರ್ ಎ ಗೆ ಪತ್ರ ಬರೆದಿದ್ದ ಕೆಎಸಿಎ, ವಿಧಾನಸೌಧದಲ್ಲಿ ಆರ್.ಸಿ.ಬಿ ಆಟಗಾರರಿಗೆ ಸನ್ಮಾನ ಮಾಡಲು ಅನುನತಿ ಕೇಳಿ ಪತ್ರ ಬರೆದಿತ್ತು.ಭದ್ರತಾ ವಿಚಾರವಾಗಿ ಅಭಿಪ್ರಾಯ ನೀಡುವಂತೆ ಭದ್ರತಾ ವಿಭಾಗದ ಡಿಸಿಪಿಗೆ ಅಧೀನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಡಿಸಿಪಿ ಕರಿಬಸವನ ಗೌಡ ಅವರು ಜೂನ್ 3ರಂದೇ DPRA ಕಾರ್ಯದರ್ಶಿಗೆ ಪತ್ರಕ್ಕೆ ಅಭಿಪ್ರಾಯ ತಿಳಿಸಿ ಮರುಪತ್ರ ಬರೆದಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಕಾರಣ ಭದ್ರತಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಭದ್ರತೆಗೆ ತೊಂದರೆಯಾಗುತ್ತದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಹೊರಗಡೆಯಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿಯೋಜನೆ ಮಾಡಿಕೊಳ್ಳಬೇಕು. ಹೀಗಾಗಿ ಕಾಲವಕಾಶ ಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆದರೂ ಸಹ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ಅವರು ಡಿಸಿಪಿ ಕರಿಬಸವನ ಗೌಡ ಅಪಾಯದ ಎಚ್ಚರಿಕೆಗೆ ಕ್ಯಾರೇ ಎನ್ನದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಅಲ್ಲದೇ ಸ್ಟೇಡಿಯಂಗೆ ಹೋಗಿ ಅಂತಲೂ ಜೂನ್ ನಾಲ್ಕುರಂದು ಸತ್ಯವತಿ ಮಾಧ್ಯಮ ಹೇಳಿಕೆ ನೀಡಿದ್ದರು. ಇದರೊಂದಿಗೆ ಮೇಲ್ನೋಟಕ್ಕೆ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ಬಟಾಬಯಲಾಗಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಈಗಾಗ್ಲೇ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೂ ಕಳಿಸಲಾಗಿದೆ. ಆದ್ರೆ, ತನಿಖೆಗೆ ಅವಶ್ಯಕತೆ ಇರೋದ್ರಿಂದ ನಾಲ್ವರನ್ನೂ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನಾಳೆ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಿದ್ಧತೆಯಲ್ಲಿದ್ದು, ಸೋಮವಾರ ಮತ್ತೆ ಕ್ರೀಡಾಂಗಣಕ್ಕೆ ಭೇಟಿ ನೀಡಲಿದ್ದಾರೆ.
ಒಂದೆಡೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ ಮತ್ತೊಂದೆಡೆ ಮ್ಯಾಜಿಸ್ಟ್ರೇಟ್ ತನಿಖೆ ಕೂಡಾ ಚುರುಕು ಪಡೆದುಕೊಂಡಿದೆ. ಬೌರಿಂಗ್ ಆಸ್ಪತ್ರೆ, ಫೋರ್ಟಿಸ್, ಮಣಿಪಾಲ ಮತ್ತು ವೈದೇಹಿ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ 10 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ವಿವರವನ್ನ ಸಂಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:21 am, Sun, 8 June 25