ಬೆಂಗಳೂರು ಉಪನಗರ ರೈಲ್ವೆ ಕಾರಿಡಾರ್‌ಗಳು 2028ಕ್ಕೆ ಪೂರ್ಣ; ಸಚಿವ ಎಂಬಿ ಪಾಟೀಲ್
Bengaluru Suburban Railway Project; ಎಲ್ಲಾ ನಾಲ್ಕು ಕಾರಿಡಾರ್‌ಗಳ ಕೆಲಸವನ್ನು 2026 ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ವಿಳಂಬವಾದರೂ ಕಾಮಗಾರಿ 2028 ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಗಡುವಿನೊಳಗೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪಾಟೀಲ್ ಹೇಳಿದರು.
ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (Bengaluru Suburban Railway Project) ನಾಲ್ಕು ಕಾರಿಡಾರ್‌ಗಳು 2028 ರ ವೇಳೆಗೆ ಸಿದ್ಧವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ (MB Patil) ಶುಕ್ರವಾರ ಹೇಳಿದ್ದಾರೆ. ಪಾಟೀಲ್ ಅವರು ಲಿಂಗರಾಜಪುರ, ಶಾಂಪುರ, ಹೆಬ್ಬಾಳ ಮತ್ತು ಯಶವಂತಪುರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾಹಿತಿ ನೀಡಿದರು. ಅವರೊಂದಿಗೆ ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಮುನಿರತ್ನ ಇದ್ದರು.
ಎಲ್ಲಾ ನಾಲ್ಕು ಕಾರಿಡಾರ್‌ಗಳ ಕೆಲಸವನ್ನು 2026 ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಪಾಟೀಲ್ ಹೇಳಿದರು. ಒಂದು ವೇಳೆ ವಿಳಂಬವಾದರೂ ಕಾಮಗಾರಿ 2028 ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಗಡುವಿನೊಳಗೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚಿಕ್ಕಬಾಣಾವರ ಮತ್ತು ಬೆನ್ನಿಗಾನ ಹಳ್ಳಿ ನಡುವಿನ ಕಾರಿಡಾರ್ಗೆ ಸಂಬಂಧಿಸಿದ ಎರಡು ಕಾಮಗಾರಿಗಳು 26 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಯೋಜನೆಯ ಕಾಮಗಾರಿಗಳಿಗೆ 7,438 ಕೋಟಿ ರೂಪಾಯಿ ಸಾಲದ ಅವಶ್ಯಕತೆ ಇದೆ ಎಂದು ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಜರ್ಮನ್ ಮತ್ತು ಯುರೋಪಿಯನ್ ಬ್ಯಾಂಕುಗಳೊಂದಿಗೆ ಚರ್ಚಿಸಲಾಗಿದೆ. 2016 ರಲ್ಲಿ, ನಾವು ಯೋಜನೆಯ ಕಾರಿಡಾರ್ 2 ರ ಕೆಲಸವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉಪನಗರ ರೈಲ್ವೆ ಕಾಮಗಾರಿ ವೀಕ್ಷಣೆಯ ವೇಳೆ ಎದುರಾದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದೆ
“ಚಿಕ್ಕ ಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವಿನ ಕಾರಿಡಾರ್-2 ಕಾಮಗಾರಿಗಳನ್ನು 26 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಒಟ್ಟಾರೆ ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2026ಕ್ಕೆ ಮುಗಿಸುವ ಉದ್ದೇಶವಿದೆ. ತಡ ಅಂದರೂ 2028ರೊಳಗೆ… pic.twitter.com/VrIeYw2x1S
— M B Patil (@MBPatil) August 11, 2023
ತಾಂತ್ರಿಕ ಸಮಸ್ಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಸಚಿವರು ಹೇಳಿದ್ದಾರೆ. ಯೋಜನೆ ಕಾಮಗಾರಿಗಾಗಿ ಸುಮಾರು 157 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆರು ಚಿಕ್ಕ ಸೇತುವೆಗಳು, ಏಳು ತಡೆಗೋಡೆಗಳು ಮತ್ತು ಆರು ಲೆವೆಲ್ ಕ್ರಾಸಿಂಗ್‌ಗಳು ಇರುತ್ತವೆ. ಇದು ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಬಲೇಶ್ವರ, ತಿಕೋಟಾದಲ್ಲಿ ಪ್ರತಿ ನಿವಾಸಿಗೆ ದಿನಕ್ಕೆ 135 ಲೀಟರ್ ನೀರು: ಸಚಿವ ಎಂಬಿ ಪಾಟೀಲ್
ಈ ಯೋಜನೆಯನ್ನು ಬೆಂಗಳೂರಿನಿಂದ ಹೊರಗಿರುವ ಇತರ ಸ್ಥಳಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ. ತುಮಕೂರು, ಮೈಸೂರು, ಕೋಲಾರ ಮತ್ತು ರಾಜ್ಯದ ಹಲವು ಸ್ಥಳಗಳಿಗೆ ವಿಸ್ತರಣೆ ಮಾಡುವ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ