Bengaluru Traffic advisory: ವಾಹನ ಸವಾರರ ಗಮನಕ್ಕೆ, ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ

ಬೆಂಗಳೂರು ಸಂಚಾರ ಸಲಹೆ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಕರ್ನಾಟಕ ದಲಿತ ಸಂಘಟನೆಗಳ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಮೆಜೆಸ್ಟಿಕ್, ಕೆ.ಜಿ. ರಸ್ತೆ ಹಾಗೂ ಸುತ್ತಮುತ್ತ ಸಂಚಾರ ಬದಲಾವಣೆ ಮಾಡಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಟ್ರಾಫಿಕ್ ಪೊಲೀಸರು ನೀಡಿರುವ ಸಲಹೆ ಇಲ್ಲಿದೆ.

Bengaluru Traffic advisory: ವಾಹನ ಸವಾರರ ಗಮನಕ್ಕೆ, ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ
ಸಾಂದರ್ಭಿಕ ಚಿತ್ರ
Image Credit source: @hsrltrafficps

Updated on: Jun 11, 2026 | 8:49 AM

ಬೆಂಗಳೂರು, ಜೂನ್ 11: ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಇಂದು (ಜೂನ್ 11, ಗುರುವಾರ) ಕರ್ನಾಟಕ ದಲಿತ ಸಂಘಟನೆಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ತಾತ್ಕಾಲಿಕ ಸಂಚಾರ ನಿರ್ಬಂಧ ಹಾಗೂ ಸಂಚಾರಕ್ಕೆ ಪರ್ಯಾಯ ಮಾರ್ಗಗಳಳನ್ನು ಪ್ರಕಟಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ.

ಮುಖ್ಯಾಂಶಗಳು

  • ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ.
  • ಮುಂಜಾನೆ 8 ರಿಂದ ಸಂಜೆ 6 ರವರೆಗೆ ನಿರ್ಬಂಧ.
  • ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ನಿಷೇಧ.

ಪ್ರತಿಭಟನಾ ಮೆರವಣಿಗೆ ಮತ್ತು ಮಾರ್ಗ ಬದಲಾವಣೆ ವಿವರ

ಪ್ರತಿಭಟನೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಸಿಟಿ ರೈಲ್ವೆ ನಿಲ್ದಾಣದಿಂದ ಫ್ಲೈಓವರ್ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಖೋಡೆ ಜಂಕ್ಷನ್‌ನಿಂದ ಕೆಆರ್ ಸರ್ಕಲ್ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ಇನ್ನು ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಜಿ. ರಸ್ತೆ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಬಲತಿರುವು ಪಡೆದು, ಮಹಾರಾಣಿ ಅಂಡರ್‌ಪಾಸ್ ರಸ್ತೆ ಹಾಗೂ ಪ್ಯಾಲೇಸ್ ಕ್ರಾಸ್ ರಸ್ತೆ ಮೂಲಕ ಮುಂದೆ ಸಾಗಬೇಕಾಗುತ್ತದೆ.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ದ್ವಿಮುಖ ಸಂಚಾರ ಹಾಗೂ ಸಂಚಾರ ಸಂಪೂರ್ಣ ನಿಷೇಧಿತ ರಸ್ತೆಗಳು

ಪ್ರತಿಭಟನೆಯ ತೀವ್ರತೆಯ ಕಾರಣದಿಂದಾಗಿ ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ನಡುವಿನ ರಸ್ತೆಯಲ್ಲಿ ಎರಡೂ ಕಡೆಯಿಂದಲೂ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಗಾಂಧಿನಗರದ ಕಡೆಗೆ ತೆರಳುವ ಸವಾರರ ಅನುಕೂಲಕ್ಕಾಗಿ, ಸಾಮಾನ್ಯವಾಗಿ ಒನ್‌ವೇ (ಏಕಮುಖ ಸಂಚಾರ) ಆಗಿರುತ್ತಿದ್ದ ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್ (MTR) ಜಂಕ್ಷನ್ ವರೆಗಿನ ರಸ್ತೆಯನ್ನು ಇಂದು ತಾತ್ಕಾಲಿಕವಾಗಿ ಟೂ-ವೇ (ದ್ವಿಮುಖ ಸಂಚಾರ) ಮಾರ್ಗವಾಗಿ ಪರಿವರ್ತಿಸಲಾಗಿದೆ.

ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?

ಸಂಚಾರಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು, ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ, ವಿ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆ.ಜಿ. ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಸಂಚಾರ ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us