
ಬೆಂಗಳೂರು, ನವೆಂಬರ್ 07: ನಗರದಲ್ಲಿ ಪ್ರತಿದಿನ ಎರಡೂವರೆ ಸಾವಿರ ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಹೀಗಾಗಿ ಪ್ರತಿದಿನ ಟ್ರಾಫಿಕ್ ಸಮಸ್ಯೆ (Traffic problem) ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಬ್ರೇಕ್ ಹಾಕಬೇಕಿದ್ದ ಪ್ರಮುಖ ಮೆಟ್ರೋ ಮಾರ್ಗವನ್ನು ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಶಾಶ್ವತವಾಗಿ ಕೈಬಿಡಲು ಮುಂದಾಗಿದೆ.
ನಗರದ ಎಲ್ಲಾ ಏರಿಯಾಗಳನ್ನು ಮತ್ತು ಎಲ್ಲಾ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುವ ಏಕೈಕ ಮೆಟ್ರೋ ಮಾರ್ಗವಾಗಲಿದ್ದ, ಇನ್ನರ್ ರಿಂಗ್ ಮೆಟ್ರೋ ಯೋಜನೆಯನ್ನು ಶಾಶ್ವತವಾಗಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇದು ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಿತ್ತಳೆ ಮಾರ್ಗಕ್ಕಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾದ BMRCL: ಸಿಡಿದೆದ್ದ ಪರಿಸರ ಪ್ರೇಮಿಗಳು
ಮಹಾಲಕ್ಷ್ಮೀ ಲೇಔಟ್ ಮೆಟ್ರೋ ಸ್ಟೇಷನ್ನಿಂದ ಕುವೆಂಪು ರಸ್ತೆ ಮೆಟ್ರೋ ಸ್ಟೇಷನ್ವರೆಗೆ ಈ ಇನ್ನರ್ ರಿಂಗ್ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲು ತಜ್ಞರು ವರದಿ ಸಿದ್ದಪಡಿಸಿದ್ದರು. ಐಐಎಸ್ಸಿ ಪ್ರೊ. ಆಶಿಷ್ ವರ್ಮ ನೇತೃತ್ವದಲ್ಲಿ ನಗರದೊಳಗೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಸಿದ್ದಪಡಿಸಿದ್ದ ಸಂಪೂರ್ಣ ಅಂಡರ್ ಗ್ರೌಂಡ್ ಮೆಟ್ರೋ ಯೋಜನೆ ಇದು. ಇನ್ನರ್ ರಿಂಗ್ ಮೆಟ್ರೋವನ್ನು ಹಂತ- 3 ರಿಂದ ಸದ್ಯ ಕೈ ಬಿಡಲಾಗಿದೆಯಂತೆ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ ಎಂದು ಇಂಜಿನಿಯರ್ ಲೋಹೀತ್ ಕುಮಾರ್ ಹೇಳುತ್ತಾರೆ.
ಈ ಇನ್ನರ್ ರಿಂಗ್ ಮಾರ್ಗವು 34 ಕಿಮೀ, 24 ಮೆಟ್ರೋ ಸ್ಟೇಷನ್, 6 ಇಂಟರ್ ಚೇಂಜ್ ಮೆಟ್ರೋ ಸ್ಟೇಷನ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ರಾಜ್ಯ ಸರ್ಕಾರ ನಗರದೊಳಗೆ ಟ್ರಾಫಿಕ್ ಕಡಿಮೆ ಮಾಡುವ ಇನ್ನರ್ ರಿಂಗ್ ಮೆಟ್ರೋ ಮಾಡುವ ಬದಲಿಗೆ ಬೆಂಗಳೂರು ಹೊರವಲಯದಲ್ಲಿರುವ ತುಮಕೂರು, ದೇವನಹಳ್ಳಿ, ಹಾರೋಹಳ್ಳಿ, ಅತ್ತಿಬೆಲೆ, ಬಿಡದಿ, ತಾವರೆಕೆರೆ, ಹೊಸಕೋಟೆ ಮತ್ತು ಜಿಗಣಿಗೆ ಮೆಟ್ರೋ ಮಾರ್ಗಗಳ ಫಿಸಿಬಿಲಿಟಿ ಸ್ಟಡಿ ಮಾಡಲು ಸರ್ಕಾರ ನಿರ್ದೇಶನ ನೀಡಿದೆ.
ಈ ಇನ್ನರ್ ಮೆಟ್ರೋ ಆರಂಭವಾಗಿದ್ದರೆ ನಗರದ ಒಳಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಯೋಜನೆ ಕೈಬಿಟ್ಟಿದ್ದು ಸರಿಯಲ್ಲ ಎಂದು ಪ್ರಯಾಣಿಕರಾದ ಪರಮೇಶ್ ಎನ್ನುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕಕ್ಕೆ ಕೊಕ್: ಹೊಸೂರು ಮೆಟ್ರೋ ಯೋಜನೆ ಕೈಬಿಟ್ಟ ಬಿಎಂಆರ್ಸಿಎಲ್
ಒಟ್ಟಿನಲ್ಲಿ ನಗರದೊಳಗಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಬೇಕಿದ್ದ ಇನ್ನರ್ ರಿಂಗ್ ಮೆಟ್ರೋ ಯೋಜನೆ ಮಾಡಲು ಬಿಎಂಆರ್ಸಿಎಲ್ ಅಧಿಕಾರಿಗಳು ಯಾಕೋ ಮನಸ್ಸು ಮಾಡುವಂತೆ ಕಾಣುತ್ತಿಲ್ಲ. ಆದರೆ ಈ ಮಾರ್ಗ ಓಪನ್ ಆಗಿದ್ದರೆ ದೊಡ್ಡ ಮಟ್ಟದಲ್ಲಿ ಜನರಿಗೆ ಸಹಾಯವಾಗುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.