
ಬೆಂಗಳೂರು, ಅಕ್ಟೋಬರ್ 19: ಪರಿಸರ ಸ್ನೇಹಿ ಎನ್ನುವ ಕಾರಣಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ಮಿನಿ ಎಲೆಕ್ಟ್ರಿಕ್ ಬೈಕ್‌ಗಳ ಬಳಕೆ ಹೆಚ್ಚಾಗುತ್ತಿದೆ. ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಇದು ಬೆಂಬಲ ನೀಡುತ್ತಿದ್ದರೂ, ಮತ್ತೊಂದೆಡೆ ಈ ವಾಹನಗಳ ಸವಾರರು ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಸಿಗ್ನಲ್ ಜಂಪ್, ಫುಟ್‌ಪಾತ್ ಮೇಲೆ ಸವಾರಿ, ನೋ-ಎಂಟ್ರಿಯಲ್ಲಿ ಪ್ರವೇಶ ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವ ಪ್ರಕರಣಗಳು ಮಿನಿ ಎಲೆಕ್ಟ್ರಿಕ್ ಬೈಕ್ ಸವಾರರಲ್ಲಿ ಹೆಚ್ಚಾಗುತ್ತಿವೆ. ನಗರದಾದ್ಯಂತ ಪಾದಾಚಾರಿಗಳ ಜೀವಕ್ಕೆ ಕುತ್ತು ತರುತ್ತಿದ್ದರೂ ಇವರ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣ ಮೋಟಾರು ವಾಹನ ಕಾಯ್ದೆಯಲ್ಲಿರುವ ಕೆಲ ತಾಂತ್ರಿಕ ನ್ಯೂನತೆಗಳು. 250 ವ್ಯಾಟ್ಸ್‌ಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಹಾಗೂ ಗಂಟೆಗೆ 25 ಕಿ.ಮೀ ಗಿಂತ ಕಡಿಮೆ ವೇಗದ ಮಿನಿ ಎಲೆಕ್ಟ್ರಿಕ್ ವಾಹನಗಳು ಮೋಟಾರು ವಾಹನ ಕಾಯ್ದೆಯಡಿ ಬರುವುದಿಲ್ಲ. ಪರಿಣಾಮವಾಗಿ, ನಿಯಮ ಉಲ್ಲಂಘಿಸುವ ಇಂತಹ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ದಂಡ ಅಥವಾ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರು, “ಸದ್ಯಕ್ಕೆ ಮೋಟಾರು ವಾಹನ ಕಾಯ್ದೆಯಡಿ ಇಂತಹ ವಾಹನಗಳ ಮೇಲೆ ಕೇಸ್ ಹಾಕಲು ಅವಕಾಶವಿಲ್ಲದ ಕಾರಣ, ನಾವು ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಸಾಮಾನ್ಯ ಬೈಕ್‌ಗಳಷ್ಟೇ ವೇಗವಾಗಿ ಚಲಿಸುವ ಈ ಮಿನಿ ಇ-ಬೈಕ್‌ಗಳಿಂದ ರಸ್ತೆ ಅಪಘಾತಗಳು ಮತ್ತು ಪಾದಾಚಾರಿಗಳಿಗೆ ಹಾನಿಯಾದರೆ ಹೊಣೆ ಯಾರು ಎನ್ನುವುದು ವಾಹನ ಸವಾರ ರಾಯಪ್ಪ ಸೇರಿದಂತೆ ಹಲವು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ವಾಹನಗಳಿಗೆ ಸೂಕ್ತ ಸಂಚಾರ ನಿಯಮ ಮತ್ತು ಕಠಿಣ ಕಾನೂನು ರೂಪಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Mon, 19 October 26