ಬೆಂಗಳೂರು ಟ್ರಾಫಿಕ್‌ನಿಂದ 21 ದಿನಗಳ ದುಡಿಮೆಯೇ ನಷ್ಟ! ಖಾಸಗಿ ಸಮೀಕ್ಷೆಯಲ್ಲಿ ತಿಳಿದುಬಂದು ಬೆಚ್ಚಿಬೀಳಿಸೋ ಮಾಹಿತಿ

ಬೆಂಗಳೂರಿನ ಟ್ರಾಫಿಕ್‌ನಿಂದ ಉದ್ಯೋಗಿಗಳು ವಾರ್ಷಿಕ ಒಟ್ಟಾರೆಯಾಗಿ 21 ಕೆಲಸದ ದಿನಗಳಿಗೆ ಸಮನಾದ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರಾಸ್ಪರ್ ಐಒ ಸಮೀಕ್ಷೆ ತಿಳಿಸಿದೆ. ಕಚೇರಿಯ ಸಮೀಪ ಮನೆ ಮಾಡಲು ಹೆಚ್ಚುವರಿ ಬಾಡಿಗೆ, ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ಗುರುತಿಸಿರುವ ಸಂಸ್ಥೆ, ಟ್ರಾಫಿಕ್ ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ನೀಡಿದೆ.

ಬೆಂಗಳೂರು ಟ್ರಾಫಿಕ್‌ನಿಂದ 21 ದಿನಗಳ ದುಡಿಮೆಯೇ ನಷ್ಟ! ಖಾಸಗಿ ಸಮೀಕ್ಷೆಯಲ್ಲಿ ತಿಳಿದುಬಂದು ಬೆಚ್ಚಿಬೀಳಿಸೋ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Oct 12, 2026 | 7:04 AM

ಮುಖ್ಯಾಂಶಗಳು

  • ಟ್ರಾಫಿಕ್‌ನಿಂದ ಉದ್ಯೋಗಿಗಳ ಸಮಯ ಮತ್ತು ದುಡಿಮೆ ನಷ್ಟ
  • ಕಚೇರಿ ಸಮೀಪದ ಮನೆಗಳಿಗೆ ಹೆಚ್ಚುವರಿ ಬಾಡಿಗೆ ಹೊರೆ
  • ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹಲವು ಸುಧಾರಣಾ ಸಲಹೆಗಳು

ಬೆಂಗಳೂರು, ಅಕ್ಟೋಬರ್ 12: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ. ಟ್ರಾಫಿಕ್ ಜಾಮ್‌ನಿಂದ ಸಮಯ ವ್ಯರ್ಥವಾಗುವುದಷ್ಟೇ ಅಲ್ಲ, ಉದ್ಯೋಗಿಗಳ ದುಡಿಮೆ, ಆರ್ಥಿಕ ಪರಿಸ್ಥಿತಿ ಮತ್ತು ತುರ್ತು ವೈದ್ಯಕೀಯ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕುರಿತು ಪ್ರಾಸ್ಪರ್ ಐಒ (Prosper IO) ಎಂಬ ಮೌಲ್ಯಮಾಪನ ಸಂಸ್ಥೆ ನಡೆಸಿದ ಸಮೀಕ್ಷೆಯು ನಗರದ ಸಂಚಾರ ದಟ್ಟಣೆಯ ಹಲವು ಅನಾನುಕೂಲಗಳನ್ನು ಗುರುತಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕೆಲವು ಸುಧಾರಣಾ ಕ್ರಮಗಳನ್ನು ಸೂಚಿಸಿದೆ.

ಟ್ರಾಫಿಕ್‌ನಿಂದ ಉದ್ಯೋಗಿಗಳ ದುಡಿಮೆಗೆ ಹೊಡೆತ

ಬೆಂಗಳೂರಿನಲ್ಲಿ ಸಂಜೆಯ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆಯಿಂದ ವ್ಯರ್ಥವಾಗುವ ಸಮಯದ ಮೌಲ್ಯವೇನು ಮತ್ತು ಅದಕ್ಕೆ ಯಾರು ಬೆಲೆ ತೆರಬೇಕಾಗುತ್ತದೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗಿದೆ. ನಗರದ ಟ್ರಾಫಿಕ್‌ನಿಂದ ಉದ್ಯೋಗಿಗಳು ವಾರ್ಷಿಕವಾಗಿ ಕಳೆದುಕೊಳ್ಳುವ ಒಟ್ಟಾರೆ ಸಮಯವು 21 ಕೆಲಸದ ದಿನಗಳಿಗೆ ಸಮನಾಗಿದೆ ಎಂದು ವರದಿ ತಿಳಿಸಿದೆ.

ಕಚೇರಿಯ ಬಳಿಯೇ ಮನೆ ಮಾಡಲು ಹೆಚ್ಚುವರಿ 2.4 ಲಕ್ಷ ರೂ. ಖರ್ಚು

ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಉದ್ಯೋಗಿಗಳು ಕಚೇರಿ ಅಥವಾ ಟೆಕ್ ಪಾರ್ಕ್‌ಗಳ ಸಮೀಪದಲ್ಲೇ ಮನೆ ಮಾಡಬೇಕಾದ ಪರಿಸ್ಥಿತಿಯೂ ಇದೆ. ಹೀಗೆ ಕಚೇರಿಯ ಹತ್ತಿರ ವಾಸಿಸಲು ವರ್ಷಕ್ಕೆ ಹೆಚ್ಚುವರಿಯಾಗಿ ಸುಮಾರು 1.6 ಲಕ್ಷದಿಂದ 2.4 ಲಕ್ಷ ರೂಪಾಯಿವರೆಗೆ ಬಾಡಿಗೆ ಪಾವತಿಸಬೇಕಾಗುತ್ತದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಉದ್ಯೋಗಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ.

ಆಂಬುಲೆನ್ಸ್ ಸಂಚಾರಕ್ಕೂ ಟ್ರಾಫಿಕ್ ಅಡ್ಡಿ

ನಗರದ ಸಂಚಾರ ದಟ್ಟಣೆಯು ತುರ್ತು ಸಂದರ್ಭಗಳಲ್ಲಿಯೂ ಆತಂಕಕ್ಕೆ ಕಾರಣವಾಗುತ್ತಿದೆ. ಟ್ರಾಫಿಕ್‌ನಿಂದಾಗಿ ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸಲು ವಿಳಂಬವಾಗುವ ಸಾಧ್ಯತೆಯಿದ್ದು, ಇದರಿಂದ ಜೀವಕ್ಕೆ ಅಪಾಯ ಎದುರಾಗಬಹುದು. ಹೃದಯಾಘಾತದ ಸಂದರ್ಭದಲ್ಲಿ ಪ್ರತಿ 30 ನಿಮಿಷಗಳ ವಿಳಂಬವು ಸಾವಿನ ಅಪಾಯವನ್ನು ಶೇ 7.5ರಷ್ಟು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ಅಗತ್ಯವಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಮೀಕ್ಷಾ ವರದಿಯಲ್ಲಿ ನೀಡಿರುವ ಸಲಹೆಗಳು

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಪ್ರಾಸ್ಪರ್ ಐಒ ಸಂಸ್ಥೆಯು ಸರ್ಕಾರಕ್ಕೆ ಹಲವು ಕ್ರಮಗಳನ್ನು ಸೂಚಿಸಿದೆ. ಅವುಗಳು ಇಲ್ಲಿವೆ;

  • ಔಟರ್ ರಿಂಗ್ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥವನ್ನು ಪುನರಾರಂಭಿಸುವುದು.
  • ಹೊರ ವರ್ತುಲ ರಸ್ತೆ ಮೆಟ್ರೋ ಯೋಜನೆಯ ಕಾಮಗಾರಿಗೆ ವೇಗ ನೀಡುವುದು.
  • ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದು.
  • ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು.
  • ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ಆದ್ಯತೆ ನೀಡುವುದು.

ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ

ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಉದ್ಯೋಗಿಗಳ ದುಡಿಮೆ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ತುರ್ತು ವೈದ್ಯಕೀಯ ಸೇವೆಗಳಿಗೂ ಅಡ್ಡಿಯಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಸಾರ್ವಜನಿಕರ ಅಮೂಲ್ಯ ಸಮಯ ಉಳಿಸುವುದರ ಜೊತೆಗೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us