ಬೆಂಗಳೂರಿನಲ್ಲೊಂದು ಘೋರ ದುರಂತ: ನಿರ್ಮಾಣ ಹಂತದ ಕಟ್ಟಡದಿಂದ ಬ್ರಿಕ್ಸ್ ಬಿದ್ದು ಮಗು ಸಾವು

ಬೆಂಗಳೂರಿನ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಹಾಲೋ ಬ್ರಿಕ್ಸ್ ಬಿದ್ದು 4 ವರ್ಷದ ಮಗು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ನಾಲ್ಕನೇ ಮಹಡಿಯಿಂದ ಇಟ್ಟಿಗೆಗಳು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಸದ್ಯ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲೊಂದು ಘೋರ ದುರಂತ: ನಿರ್ಮಾಣ ಹಂತದ ಕಟ್ಟಡದಿಂದ ಬ್ರಿಕ್ಸ್ ಬಿದ್ದು ಮಗು ಸಾವು
ನಿರ್ಮಾಣ ಕಟ್ಟಡ, ಮೃತ ಮಗು
Edited By:

Updated on: Dec 18, 2025 | 9:19 PM

ಬೆಂಗಳೂರು, ಡಿಸೆಂಬರ್​ 18: ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಗು (child) ಸಾವನ್ನಪ್ಪಿರುವಂತಹ (death) ಘಟನೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ಹೆಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಸಂಭವಿಸಿದೆ. ಶ್ರೀಶೈಲ್ ಎಂಬುವವರ ಪುತ್ರಿ ಮನುಶ್ರೀ ಅಲಿಯಾಸ್ ಪಾರು(4) ಸಾವನ್ನಪ್ಪಿರುವ ಮಗು. ಮತ್ತಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ವಿಜಯಪುರ ಜಿಲ್ಲೆಯ ಸಿಂಧಗಿ ಮೂಲದ ಮಮತಾ ಮತ್ತು ಶ್ರೀಶೈಲ್ ದಂಪತಿಯ ಹಿರಿಯ ಮಗಳು ಮನುಶ್ರೀ. ಮೃತ ಬಾಲಕಿ ಮನುಶ್ರೀ ತಾಯಿ ಒಂದು ತಿಂಗಳ ಬಾಣಂತಿಯಾಗಿದ್ದು, ಎರಡನೇ ಮಗುವಿನ ಹೆರಿಗೆಗೆ ಚಿನ್ನಪ್ಪನಹಳ್ಳಿಯ ತನ್ನ ಸಹೋದರಿ ಮಧು ಎಂಬುವವರ ಮನೆಗೆ ಬಂದಿದ್ದರು. ಮನುಶ್ರೀ ಎಂದಿನಂತೆ ಶಾಲೆ ಮುಗಿಸಿ ಮಧ್ಯಾಹ್ನ 2:30 ರ ಸುಮಾರಿಗೆ ಮನೆಗೆ ಬಂದಿದ್ದಳು. ತನ್ನ ದೊಡ್ಡಮ್ಮನ ಮಕ್ಕಳಾದ ಶೇಖರ್ ಹಾಗೂ ಶ್ರೀಯಾನ್ ಜೊತೆ ಊಟ ಮಾಡಿ ಮನೆಯ ಹಾಲ್​ನಲ್ಲಿ ನಿದ್ರೆಗೆ ಜಾರಿದ್ದಳು.

ಇದನ್ನೂ ಓದಿ: Dharwad: ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಯುವತಿ; ಸಿಕ್ಕಿದ್ದು ಎರಡೆರಡು ಡೆತ್​​ನೋಟ್​​!

ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನುಶ್ರೀ ಕುಟುಂಬಸ್ಥರು ವಾಸವಿದ್ದ ಮನೆ ಪಕ್ಕದಲ್ಲೇ ನಿರ್ಮಾಣವಾಗ್ತಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಹತ್ತರಿಂದ ಹನ್ನೆರಡು ಹಾಲೋಬ್ರಿಕ್ಸ್ ಇಟ್ಟಿಗೆಗಳು ಮನುಶ್ರೀ ಮಲಗಿದ್ದ ಶೀಟಿನ ಮನೆ ಮೇಲೆ ಬಿದ್ದಿವೆ. ಏಕಾಏಕಿ ಅಷ್ಟೊಂದು ಇಟ್ಟಿಗೆ ಮನೆಯ ಶೀಟ್ ಮೇಲೆ ಬಿದ್ದ ಪರಿಣಾಮ ಶೀಟ್ ಒಡೆದು ಮನೆಯೊಳಗೆ ಮಲಗಿದ್ದ ಮನುಶ್ರೀ, ತಾಯಿ ಮಮತಾ, ಸಹೋದರರಾದ ಶೇಖರ್ ಹಾಗೂ ಶ್ರೀಯಾನ್ ಮೇಲೆ ಬಿದ್ದಿದೆ. ಇಟ್ಟಿಗೆ ಬಿದ್ದ ಪರಿಣಾಮ ಮನುಶ್ರೀ ತಲೆಗೆ ಗಂಭೀರ ಗಾಯಗಳಾಗಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಾಯಾಳು ಮಕ್ಕಳಾದ ಶ್ರಿಯನ್ (6) ಮತ್ತು ಶೇಖರ್(5)ರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪ

ನಿರ್ಮಾಣ ಹಂತದ ಕಟ್ಟಡ ಶ್ರೀನಿವಾಸುಲು ಎಂಬುವವರಿಗೆ ಸೇರಿದೆ. ನಿರ್ಮಾಣ ವೇಳೆ ಅಗತ್ಯವಾದ ಸುರಕ್ಷತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 4ನೇ ಮಹಡಿ ಮೇಲಿಂದ ಸುಮಾರು 10 ರಿಂದ 12 ಸಿಮೆಂಟ್ ಇಟ್ಟಿಗೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಮನೆಯ ಶೀಟ್‌ ಸಂಪೂರ್ಣ ಧ್ವಂಸವಾಗಿದೆ. ಮನೆಯಲ್ಲಿದ್ದ ಮಗುವಿನ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿದೆ.

ಡಿವೈಡರ್​ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ಡಿವೈಡರ್​ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸಮೀಪದ ವಣಕನಹಳ್ಳಿ ಸಮೀಪ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಆಕಾಶ್(23) ದುರ್ಮರಣ.

ಆಕಾಶ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಶವವನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಆನೇಕಲ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹತ್ತು ಅಡಿ ಹಾರಿದ ಕಾರು: ಇಬ್ಬರು ಅದೃಷ್ಟವಶಾತ್ ಪಾರು

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ಹತ್ತು ಅಡಿ ಹಾರಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಮಿತ್ರ ದ್ರೋಹ: ತಂಗಿ ಜೊತೆ ಲವ್ವಿಡವ್ವಿ; ಗೆಳೆಯನಿಗೆ ಚಟ್ಟ ಕಟ್ಟಿದ ಸ್ನೇಹಿತರು

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರಿಗೆ ಬೈಕ್ ಅಡ್ಡ ಬಂದಿದೆ. ಬೈಕ್ ಸವಾರನನ್ನ ಬಚಾವು ಮಾಡಲು ಹೋಗಿ ಡಿವೈಡರ್​​ಗೆ ಡಿಕ್ಕಿಯಾಗಿ ಹತ್ತು ಅಡಿ ಕಾರು ಹಾರಿದೆ. ಕಾರಿನ ರಸ್ತೆ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Thu, 18 December 25