ಆನೇಕಲ್: ಎರಡು ಎಕರೆ ಸ್ಥಳದಲ್ಲಿ ತಲೆ ಎತ್ತಲಿರುವ ಸುಸಜ್ಜಿತ ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ವಿ ಸೋಮಣ್ಣ
ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಸಂಕೀರ್ಣಕ್ಕೆ ಇಂದು ಸಚಿವ ವಿ ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಚಿವರು, ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆನೇಕಲ್: ತಾಲೂಕಿನ ಸೂರ್ಯ ನಗರದ ಮೊದಲನೆ ಹಂತದಲ್ಲಿ ಎರಡು ಎಕರೆ ಆರು ಗುಂಟೆಯ ವಿಸ್ತೀರ್ಣದ ಪ್ರದೇಶದಲ್ಲಿ 138.60 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ (Commercial Complex) ಕಟ್ಟಡ ನಿರ್ಮಾಣವಾಗಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ವಿ.ಸೋಮಣ್ಣ (V Somanna) ಅವರು ಹೇಳಿದರು. ಇಂದು (ಮಾರ್ಚ್ 7) ವಾಣಿಜ್ಯ ಸಂಕೀರ್ಣ (ಮಲ್ಟಿ ಪ್ಲೆಕ್ಸ್) ಕಟ್ಟಡ ಹಾಗೂ ಕರ್ನಾಟಕ ಗೃಹ ಮಂಡಳಿಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾಹಿತಿ ನೀಡಿದರು.
ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಸಂಕೀರ್ಣ (ಮಲ್ಟಿ ಪ್ಲೆಕ್ಸ್) ಕಟ್ಟಡದ ತಳ ಮಹಡಿಯ ಒಂದು ಮತ್ತು ಎರಡರಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್, ಯಂತ್ರಗಳು ಮತ್ತು ನಿರ್ವಹಣೆ ಕೊಠಡಿಗಳು, ನೆಲ ಮತ್ತು ಮೊದಲನೇ ಮಹಡಿಯಲ್ಲಿ ದೊಡ್ಡ ಮತ್ತು ಇತರೆ ಅಂಗಡಿಗಳು, ಎರಡನೇ ಮಹಡಿಯಲ್ಲಿ ಫುಡ್ ಕೋರ್ಟ್ ಮತ್ತು ಗೇಮಿಂಗ್ ವಲಯ, ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ನಾಲ್ಕು ಸ್ಕ್ರೀನ್ಗಳು ಹೊಂದಿರುವ ಚಿತ್ರಮಂದಿರಗಳು ನಿರ್ಮಾಣವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ‘ಕೈ’ ಹಿಡಿಯುವ ವದಂತಿ ನಡುವೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಜೊತೆ ವೇದಿಕೆ ಹಂಚಿಕೊಂಡ ವಿ ಸೋಮಣ್ಣ
ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ
ಇದೇ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರು, ಸೂರ್ಯ ನಗರದಲ್ಲಿ ಸುಸಜ್ಜಿತವಾದ ಪೊಲೀಸ್ ಠಾಣೆಯನ್ನು ನಿರ್ಮಿಸುವಂತೆ ಮನವಿ ಮಾಡಿದರು. ಸಾರ್ವಜನಿಕರ ಮನವಿಗೆ ಸ್ಥಳದಲ್ಲಿ ಇದ್ದ ಪೊಲೀಸ್ ಅಧಿಕಾರಿಗೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಮಂಡಳಿಯ ಗೃಹ ಆಯುಕ್ತರಾದ ಕವಿತ ಎಸ್. ಮನ್ನಿಕೇರಿ, ಕರ್ನಾಟಕ ಗೃಹ ಮಂಡಳಿಯ ಮುಖ್ಯ ಅಭಿಯಂತರರಾದ ಶರಣಪ್ಪ ಸಲಗುಂಟೆ, ಕರ್ನಾಟಕ ಗೃಹ ಮಂಡಳಿಯ ಕಾರ್ಯದರ್ಶಿ ಎನ್.ಆರ್ ಸಿದ್ಧಲಿಂಗಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Tue, 7 March 23