ಬೆಂಗಳೂರು ಫೆಬ್ರವರಿ 26: ನೀವು ಸಂಚಾರ ನಿಯಮವನ್ನು (Traffic Rules) ಉಲ್ಲಂಘಿಸಿದ್ದೀರಿ ದಂಡ ಪಾವತಿಸಿ ಎಂದು ನಿಮ್ಮ ವಾಟ್ಸಪ್ (Whats Up) ನಂಬರ್ಗೆ ಸಂದೇಶ ಬಂದರೇ, ಹಣ ಪಾವತಿಸುವುಕ್ಕಿಂತ ಮುಂಚೆ ಒಂದು ಬಾರಿ ಮರು ಪರಿಶೀಲಿಸಿಕೊಳ್ಳಿ. ಏಕೆಂದರೆ ಅದು ಸೈಬರ್ ವಂಚಕರ ಸಂದೇಶವೂ ಆಗಿರಬಹುದು. ಹೌದು ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಹೆಸರಿನಲ್ಲಿ ಬೆಂಗಳೂರಿನ ವಾಹನ ಮಾಲೀಕರನ್ನು ಸೈಬರ್ ವಂಚಕರು ವಂಚಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ದಂಡ ಪಾವತಿಸಿದ ನಂತರವೂ, ಮತ್ತೆ ದಂಡ ಪಾವತಿಸುವಂತೆ ವಾಹನ ಮಾಲೀಕರಿಗೆ ಬೆಂಗಳೂರು ಸಂಚಾರ ಪೊಲೀಸರ (Bengaluru Traffic Police) ಹೆಸರಿನಲ್ಲಿ ಸೈಬರ್ ವಂಚಕರು ವಾಟ್ಸಪ್ಗೆ ಸಂದೇಶ ಕಳುಹಿಸುತ್ತಿದ್ದಾರೆ. ಈ ಮೂಲಕ ಸೈಬರ್ ವಂಚಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿರುವುದು ಗಮನಾರ್ಹ.
ಸೈಬರ್ ವಂಚಕರು ವಾಹನ ಮಾಲೀಕರಿಗೆ “ವಾಟ್ಸಾಪ್ನಲ್ಲಿ, ಸಂಚಾರಿ ನಿಯಮ ಉಲ್ಲಂಘನೆಯ ದಂಡ ಬಾಕಿ ಇದೆ. ನಾವು ಕಳುಹಿಸಿದ ಕ್ಯೂಆರ್ ಕೋಡ್ ಮೂಲಕ ದಂಡವನ್ನು ಪಾವತಿಸಿ” ಸಂಚಾರ ಪೊಲೀಸ್ ಇಲಾಖೆ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.
ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಅವರು ಮಾತನಾಡಿ, ಬೆಂಗಳೂರು ವಾಹನ ಮಾಲೀಕರು ಇಂತಹ ವಂಚನೆ ಜಾಲಗಳಲ್ಲಿ ಸಿಲುಕಬೇಡಿ. ಬೆಂಗಳೂರು ಸಂಚಾರ ಪೊಲೀಸರು ನೋಟೀಸ್ ಅನ್ನು ಪೋಸ್ಟ್ ಮೂಲಕ ಮಾತ್ರ ಕಳುಹಿಸುತ್ತದೆ. ನಾವು WhatsApp ಸಂದೇಶಗಳನ್ನು ಕಳುಹಿಸುವುದಿಲ್ಲ ಮತ್ತು QR ಕೋಡ್ ಮೂಲಕ ದಂಡವನ್ನು ಪಾವತಿಸಲು ಯಾವುದೇ ಆಯ್ಕೆಗಳಿಲ್ಲ ಎಂದು ಹೇಳಿದರು.
ಯಾವುದೆ ತರಹದ ಸಂದೇಶ, ಸೂಚನೆಗಳಿದ್ದರೆ ನಮ್ಮ ವೆಬ್‌ಸೈಟ್ https://btp.gov.in ನಲ್ಲಿ ತಿಳಿಸುತ್ತೇವೆ. ಬೇರೆ ಯಾವುದೇ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಬರುವ ಸಂದೇಶ ಅಥವಾ ಸೂಚನೆಗಳನ್ನು ನಂಬಿ ಮೋಸ ಹೋಗಬೇಡಿ. ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಐದು ಪ್ರತ್ಯೇಕ ದೂರು ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ
ಇನ್ನು ಜನರಿಗೆ ವಂಚನೆ ಎಸಗವ ಐದು ಅನಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ Google Play Storeನಿಂದ ತೆಗೆದಿದೆ. ಈ ಆ್ಯಪ್‌ಗಳ ಮುಖಾಂತರ ವಂಚಕರು ವಾಹನ ಮಾಲೀಕರಿಗೆ ವಂಚಿಸುತ್ತಿದ್ದರು. ಅನೇಕರು ಈ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿದ್ದಾರೆ ಮತ್ತು ಬಳಸುತ್ತಿದ್ದಾರೆ.
ಬೆಂಗಳೂರು ಟ್ರಾಫಿಕ್, ಬೆಂಗಳೂರು ಟ್ರಾಫಿಕ್ ಚೆಕ್ ಎಫ್, ಟ್ರಾಫಿಕ್ ಬೆಂಗಳೂರು, ಬೆಂಗಳೂರು ಟ್ರಾಫಿಕ್ ಫೈನ್ ಚೆಕರ್ ಮತ್ತು ಟ್ರಾಫಿಕ್ ಫೈನ್ಸ್ ಬೆಂಗಳೂರು ಎಂಬ ಐದು ಮೊಬೈಲ್ ಅಪ್ಲಿಕೇಶನ್‌ಗಳ ಡೆವಲಪರ್‌ಗಳ ವಿರುದ್ಧ ಈಗಾಗಲೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Mon, 26 February 24