ಮಳೆಯಾದರೂ ಬಗೆಹರಿದಿಲ್ಲ ಬೆಂಗಳೂರು ನೀರಿನ ಬಿಕ್ಕಟ್ಟು: ಈ ಪ್ರದೇಶಗಳಲ್ಲಿ ಟ್ಯಾಂಕರ್ ನೀರಿನ ಬೆಲೆ ಬಲು ದುಬಾರಿ
ಮುಂಗಾರು ಮಳೆಯ ಆಗಮನವಾದರೂ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ನೀರಿನ ಬಿಕ್ಕಟ್ಟು ಕೊನೆಯಾಗಿಲ್ಲ. ವೈಟ್‌ಫೀಲ್ಡ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಟ್ಯಾಂಕರ್‌ಗಳು ಮಿತಿಮೀರಿ ದರ ಹೇರುತ್ತಿದ್ದು, ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಯಾವೆಲ್ಲ ಪ್ರದೇಶಗಳಲ್ಲಿ ಇನ್ನೂ ಸಮಸ್ಯೆ ಇದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜೂನ್ 24: ಬರ ಪರಿಸ್ಥಿತಿಯ ಕಾರಣ ಈ ವರ್ಷ ಬೆಂಗಳೂರಿನಲ್ಲಿ (Bengaluru) ತೀವ್ರವಾದ ನೀರಿನ ಬಿಕ್ಕಟ್ಟು (Water Crisis) ಸೃಷ್ಟಿಯಾಗಿತ್ತು. ಇದೀಗ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ (Monsoon Rain) ರಾಜ್ಯ ಪ್ರವೇಶಿಸಿದ್ದು, ಬೆಂಗಳೂರು ನಗರವೂ ಸೇರಿದಂತೆ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಆದಾಗ್ಯೂ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ! ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದರೂ, ಬಹಳಷ್ಟು ಪ್ರದೇಶಗಳಲ್ಲಿನ ನಿವಾಸಿಗಳು ಕುಡಿಯಲು ಮತ್ತು ಅಡುಗೆ ಮಾಡಲು ಮತ್ತು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ದುರದೃಷ್ಟವಶಾತ್, ನಗರದಲ್ಲಿ ನೀರಿನ ಟ್ಯಾಂಕರ್‌ಗಳು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿವೆ.
ನಗರದ ಹೊರವಲಯದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಹೆಚ್ಚಿನವರು ಬೋರ್‌ವೆಲ್‌ಗಳ ನೀರನ್ನು ಅವಲಂಬಿಸಿರುವುದರಿಂದ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹಲವು ಕಡೆ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಕಾರಣ ಆ ಪ್ರದೇಶದ ನಿವಾಸಿಗಳು ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.
ಎಲ್ಲೆಲ್ಲಿ ನೀರಿನ ಬಿಕ್ಕಟ್ಟು?
ಬೆಂಗಳೂರು ಪೂರ್ವದ ವೈಟ್‌ಫೀಲ್ಡ್ ಮತ್ತು ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಂತಹ ಪ್ರದೇಶಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಪ್ರದೇಶಗಳ ನಿವಾಸಿಗಳು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ನೀರಿನ ಟ್ಯಾಂಕರ್‌ಗಳ ಬೆಲೆ ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಮತ್ತು ತುಂಬಾ ದುಬಾರಿಯಾಗಿರುವುದು ಜನರನ್ನು ಸಂಕಷ್ಟಕ್ಕೀಡುಮಾಡಿದೆ.
1200 ಲೀಟರ್ ಟ್ಯಾಂಕರ್ ನೀರಿಗೆ 1,800 ರೂ. ಪಾವತಿಸುತ್ತಿರುವುದಾಗಿ ವೈಟ್‌ಫೀಲ್ಡ್ ರೈಸಿಂಗ್‌ನ ಸದಸ್ಯರೊಬ್ಬರು ಹೇಳಿಕೊಂಡಿರುವುದಾಗಿ ಪತ್ರಿಕಾ ವರದಿಯೊಂದು ಉಲ್ಲೇಖಿಸಿದೆ. ಇದು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಬೆಂಗಳೂರು: ನಿರ್ವಹಣೆಯಿಲ್ಲದೇ ಸೊರಗಿದ ನೀರಿನ ಕಾರಂಜಿಗಳು, ಡೆಂಗ್ಯೂ – ಮಲೇರಿಯಾಗೂ ಇದೇ ಹಾಟ್ಸ್ಪಾಟ್
ಈ ವರ್ಷ ಬೇಸಿಗೆಯಲ್ಲಿ ಬೆಂಗಳೂರು ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಟ್ಯಾಂಕರ್ ಮಾಫಿಯಾ ಪರಿಣಾಮ ನೀರಿನ ಬೆಲೆಯೂ ವಿಪರೀತ ಹೆಚ್ಚಾಗಿತ್ತು. ನಂತರ ಕ್ರಮ ಕೈಗೊಂಡಿದ್ದ ರಾಜ್ಯ ಸರ್ಕಾರ ಹಾಗೂ ಜಲ ಮಂಡಳಿ, ಟ್ಯಾಂಕರ್ ನೀರಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ್ದವು. ಆದಾಗ್ಯೂ, ಇದೀಗ ಮಳೆ ಬಂದ ನಂತರವೂ ವೈಟ್‌ಫೀಲ್ಡ್, ಕನಕಪುರ ರಸ್ತೆ ಪ್ರದೇಶಗಳ ನಿವಾಸಿಗಳ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ