ಬೆಂಗಳೂರು, ಮಾರ್ಚ್ 19: ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ (Bengaluru Water Crisis) ಶುರುವಾಗಿದ್ದು ಕುಡಿಯುವ ನೀರಿಗಾಗಿ ಜನರು ವಾಟರ್ ಟ್ಯಾಂಕರ್ (Water Tanker) ಮೊರೆ ಹೋಗಿದ್ದಾರೆ. ಅನೇಕ ಮನೆಗಳಿಗೆ, ಏರಿಯಾಗಳಿಗೆ ವಾಟರ್ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಯ ಅಭಾವ, ಅಂತರ್ಜಲ ಕುಸಿತದ ಪರಿಣಾಮ ಕೆರೆ, ಕಟ್ಟೆ, ಬೋರ್‌ವೆಲ್‌ಗಳಲ್ಲಿ ನೀರು ಇಂಗಿಹೋಗಿದೆ. ಹೀಗಾಗಿ ಬೆಂಗಳೂರಿನಾದ್ಯಂತ ಕುಡಿಯುವ ನೀರಿಗೆ ಭಾರಿ ಅಭಾವ ತಲೆದೋರಿದ್ದು ವಾಟರ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರಿನ ಸಮಸ್ಯೆ ರಾಜಧಾನಿಯ ಆಸ್ಪತ್ರೆಗಳಲ್ಲೂ ತಲೆದೂರಿದೆ. ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಖಾಯಿಲೆಗಳು ಹೆಚ್ಚಾಗಿದ್ದು, ರೋಗಿಗಳ ಸಂಖ್ಯೆ ಅಧಿಕವಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೀರಿನ ಬೇಡಿಕೆಯೂ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಬೇಡಿಕೆಯಷ್ಟು ನೀರು ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಒಂದು ಬೆಡ್ಗೆ ಕನಿಷ್ಠ 40 ಲೀಟರ್ ನೀರು ಬೇಕು. ಮೊದಲು ನೀರಿನ ಟ್ಯಾಂಕರ್ ಕೆಲವೆ ನಿಮಿಷಗಳಲ್ಲಿ ಬರುತ್ತಿತ್ತು. ಇದೀಗ ಟ್ಯಾಂಕರ್ ನೀರನ್ನು ಬುಕ್ ಮಾಡಿ, 2-3 ದಿನಗಳ ಬಳಿಕ ಬರುತ್ತಿವೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸಮಸ್ಯೆ ತೋಡಿಕೊಂಡಿದೆ.
ಇದರಿಂದ ರೊಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಆಸ್ಪತ್ರೆಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಿ ಎಂದು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಬೆಂಗಳೂರಿಗೆ ದಿನಕ್ಕೆಷ್ಟು ಬೇಕು ನೀರು, ಎಷ್ಟಿದೆ ಕೊರತೆ: ಸಿಎಂ ಸಿದ್ದರಾಮಯ್ಯ ಕೊಟ್ಟ ಮಾಹಿತಿ ಇಲ್ಲಿದೆ
ಸದ್ಯ ಶಾಲೆಗಳಲ್ಲಿ SSLC ಹಾಗು PUC ಪರೀಕ್ಷೆಗಳು ನಡೆಯುತ್ತಿವೆ. ಲಕ್ಷಾಂತರ ಮಕ್ಕಳು ಪರೀಕ್ಷೆ ಬರೆಯತ್ತಿದ್ದಾರೆ. ಆದರೆ ಸದ್ಯ ಶಾಲೆಗಳಲ್ಲಿ ನೀರು ಸಾಕಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಶಾಲೆಯವರು ವಾಟರ್ ಕ್ಯಾನ್ಗಳನ್ನ ಹೊರಗಡೆಯಿಂದ ತಂದು ನೀರು ಕೊಡಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಪರೀಕ್ಷೆಗಳನ್ನ ನಡೆಸಲು ಶಿಕ್ಷಣ ಸಂಸ್ಥೆಗಳು ಪರದಾಡುತ್ತಿದ್ದು ಈ ಎಲ್ಲ ಪರೀಕ್ಷೆಗಳು ಮುಗಿಯುವವರೆಗೆಯಾದರೂ BWSSB ಯಿಂದ ಕುಡಿಯುವ ನೀರು ನೀಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಿಎಂಗೆ ಪತ್ರ ಬರೆದು ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ.
ಶಾಲೆಗಳಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರು ಪರದಾಡುತ್ತಿದ್ದಾರೆ. ಹೀಗಾಗಿ ಪರೀಕ್ಷೆಗಳು ಕಂಪ್ಲೀಟ್ ಮುಗಿಯುವವರೆಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಪೂರೈಸುವಂತೆ ಶಾಲೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಒತ್ತಾಯ ಕೇಳಿ ಬಂದಿದ್ದು ಶಿಕ್ಷಣ ಸಚಿವರು ಕೂಡಾ ಶಾಲೆಗಳಲ್ಲಿನ ನೀರಿನ ಸಮಸ್ಯೆ ಇದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದಿದ್ದರು.
ಬೆಂಗಳೂರಿನಲ್ಲಿ ಬೇಸಿಗೆ ಮುನ್ನವೆ ಒಂದೆಡೆ ನೀರಿಗೆ ಹಾಹಾಕಾರ ಶುರುವಾಗಿದ್ರೆ, ಮತ್ತೊಂದೆಡೆ ಟ್ಯಾಂಕರ್ ನೀರು ಸೇರಿದಂತೆ ಕಲುಷಿತ ನೀರಿನಿಂದ ಸಾಂಕ್ರಮಿಕ ಖಾಯಿಲೆಗಳ ಏರಿಕೆಯ ಬಿಸಿ ತಟ್ಟಿದೆ. ಈ ನಡುವೆ ಶಾಲಾ ಪರೀಕ್ಷೆಗಳಿಗೂ ನೀರಿನ ಬಿಸಿ ಎದುರಾಗಿದ್ದು ಸರ್ಕಾರ ಶಾಲೆಗಳಿಗೆ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Tue, 19 March 24