ತಡರಾತ್ರಿ ಬೆಂಗಳೂರಿನ 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ರೈಡ್

ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಪಿ ಸೈದುಲ್ಲಾ ಅಡಾವತ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ತಪಾಸಣೆ ಮಾಡಲಾಗಿದೆ. ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ತಡರಾತ್ರಿ ಬೆಂಗಳೂರಿನ 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ರೈಡ್
ಬೆಂಗಳೂರು ರೌಡಿ

Updated on: Jul 18, 2026 | 2:45 PM

ಬೆಂಗಳೂರು, ಜು.18: ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ವೈಟ್‌ಫೀಲ್ಡ್ ವಿಭಾಗದ ಪೊಲೀಸರು ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ (DCP) ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಏಕಕಾಲಕ್ಕೆ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ.

ನಗರದ ವೈಟ್‌ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್. ಪುರಂ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ತಡರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಪೊಲೀಸರು ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಈ ಮೆಗಾ ರೈಡ್‌ಗಾಗಿ ಒಟ್ಟು 28 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 140ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಏಕಕಾಲಕ್ಕೆ ರೌಡಿಗಳ ಮನೆಗಳಿಗೆ ನುಗ್ಗಿದ್ದಾರೆ.

ಪೊಲೀಸ್ ತಂಡಗಳು ರೌಡಿಶೀಟರ್‌ಗಳ ಮನೆ, ಪ್ರಸ್ತುತ ವಿಳಾಸ ಹಾಗೂ ಅವರ ಪೂರ್ವಾಪರಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಕೆಲವು ರೌಡಿಗಳನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸರಿಯಾದ ದಾಖಲೆ ಪತ್ರಗಳಿಲ್ಲದ ಒಟ್ಟು 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ

ದಾಳಿ ವೇಳೆ ರೌಡಿಶೀಟರ್‌ಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಅಥವಾ ಅಕ್ರಮ ವಸ್ತುಗಳು ಇವೆಯೇ ಎಂದು ತಪಾಸಣೆ ನಡೆಸಿದ ಪೊಲೀಸರು, ಎಲ್ಲರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವುದು, ಹಫ್ತಾ ವಸೂಲಿ ಅಥವಾ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಜೈಲಿಗಟ್ಟಲಾಗುವುದು ಎಂದು ಖಾಕಿ ಪಡೆ ಖಡಕ್ ವಾರ್ನಿಂಗ್ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us