ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್: ಮೃತಪಟ್ಟವರ ಖಾತೆಗೆ ಹಣ, 86 ಲಕ್ಷ ರೂ. ರಿಕವರಿ
ಕೊಪ್ಪಳ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಭಾರೀ ಅಕ್ರಮ ಬಯಲಾಗಿದೆ. ಮೃತಪಟ್ಟ 7,085 ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಿದ್ದು, ಇಲ್ಲಿಯವರೆಗೆ 86 ಲಕ್ಷ ವಸೂಲಿ ಮಾಡಲಾಗಿದೆ. ಸುಮಾರು 26,000 ನಕಲಿ ಹಾಗೂ ಬಹುವಿಧ ಖಾತೆಗಳು ಪತ್ತೆಯಾಗಿವೆ. 2-3 ಕೋಟಿ ರೂಪಾಯಿಗಳಷ್ಟು ಹಣದ ಗೋಲ್ ಮಾಲ್ ಅಂದಾಜಿಸಲಾಗಿದ್ದು, ಗ್ಯಾರಂಟಿ ಸಮಿತಿ ತೀವ್ರ ತನಿಖೆ ನಡೆಸುತ್ತಿದೆ.

ಕೊಪ್ಪಳ, ಆ.08: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಾಗೂ ಗೋಲ್ ಮಾಲ್ ನಡೆದಿರುವುದು ಬಯಲಿಗೆ ಬಂದಿದೆ. ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೂ ಸತತವಾಗಿ ಹಣ ಜಮೆಯಾಗುತ್ತಿದ್ದು, ಇದನ್ನು ಗಮನಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿ ತನಿಖೆ ನಡೆಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿದೆ. ಈ ಕುರಿತು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಸತ್ಯಗಳನ್ನು ಹೊರಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 7,085 ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು. ಈ ಪೈಕಿ ಹಲವು ಕುಟುಂಬದವರು ತಮ್ಮ ಮನೆಯಲ್ಲಿ ಸದಸ್ಯರು ಮೃತಪಟ್ಟಿರುವ ವಿಷಯವನ್ನು ಇಲಾಖೆಗೆ ತಿಳಿಸಿರಲಿಲ್ಲ. ಗ್ಯಾರಂಟಿ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮರಣ ಪ್ರಮಾಣ ಪತ್ರಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ಮೃತರ ಖಾತೆಯಿಂದ ಹಣ ಡ್ರಾ ಮಾಡಿದ್ದ ಮತ್ತು ಡ್ರಾ ಮಾಡದೇ ಉಳಿದಿದ್ದ ಖಾತೆಗಳನ್ನು ಪರಿಶೀಲಿಸಿ ಇದುವರೆಗೆ 86 ಲಕ್ಷ ರೂಪಾಯಿಗಳನ್ನು ರಿಕವರಿ ಮಾಡಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಮೃತರ ಖಾತೆಗಳ ಮೂಲಕ ಸುಮಾರು 2 ರಿಂದ 3 ಕೋಟಿ ರೂಪಾಯಿಗಳಷ್ಟು ಹಣ ತಪ್ಪು ಖಾತೆಗಳಿಗೆ ತಲುಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಸುಮಾರು 26,000 ಮಲ್ಟಿಪಲ್ (ಬಹುವಿಧ) ಖಾತೆಗಳು ಪತ್ತೆಯಾಗಿದ್ದು, ಕೆಲವು ಫಲಾನುಭವಿಗಳ ಖಾತೆಗಳು ಹೊರ ರಾಜ್ಯಗಳಲ್ಲೂ ಇರುವುದು ಕಂಡುಬಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,13,500 ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು 63 ಕೋಟಿ ರೂಪಾಯಿ ಜಮೆಯಾಗುತ್ತಿದೆ. ಇದೀಗ ಸರ್ಕಾರ ಸೂಚನೆಯಂತೆ ಪ್ರತಿಯೊಂದು ಖಾತೆಯನ್ನೂ ತೀವ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?
ದಕ್ಷಿಣ ಕನ್ನಡದಲ್ಲೂ ಗೃಹಲಕ್ಷ್ಮಿ ಅಕ್ರಮ ಬಯಲು:
ಕೊಪ್ಪಳದಲ್ಲಿ ನಡೆದಂತೆ ಇಂತಹ ಘಟನೆ ಈ ಹಿಂದೆ ಮಂಗಳೂರಿನಲ್ಲೂ ಕೂಡ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಪತ್ತೆಯಾಗಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣವೇ ಜಾಗೃತಗೊಂಡು ಹಣ ಮರುಪಡೆಯಲು ಹಾಗೂ ಖಾತೆಗಳನ್ನು ಸ್ಥಗಿತಗೊಳಿಸಲು ಸಮರೋಪಾದಿ ಕ್ರಮಕ್ಕೆ ಮುಂದಾಗಿತ್ತು. ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ಭರತ್ ಮುಂಡೋಡಿ ಅವರು, ಮೃತ ಫಲಾನುಭವಿಗಳ ಖಾತೆಗೆ ಜಮೆಯಾದ ಹಣವನ್ನು ತಕ್ಷಣವೇ ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಸಭೆಯಲ್ಲಿ ಮತ್ತೊಂದು ಗಂಭೀರ ವ್ಯತ್ಯಾಸ ಕಂಡುಬಂದಿದ್ದು, ಕೆಲವು ಜೀವಂತ ಫಲಾನುಭವಿಗಳನ್ನು ಇಲಾಖೆಯ ದಾಖಲೆಗಳಲ್ಲಿ ‘ಮೃತಪಟ್ಟವರು’ ಎಂದು ಗುರುತಿಸಲಾಗಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ಮುಂದಿನ ಪರಿಶೀಲನಾ ಸಭೆಯಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



