AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ, ಕನ್ನಡದಲ್ಲೇ ವ್ಯವಹರಿಸಿ: ಸಚಿವ ತಂಗಡಗಿ

ಕರ್ನಾಟಕದಲ್ಲಿ ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ, ಕನ್ನಡದಲ್ಲೇ ವ್ಯವಹರಿಸಿ: ಸಚಿವ ತಂಗಡಗಿ

ಶಿವಕುಮಾರ್ ಪತ್ತಾರ್
| Edited By: |

Updated on: Sep 02, 2026 | 10:44 AM

Share

ಬ್ಯಾಂಕ್ ಆಫ್ ಬರೋಡಾದ ರೀತಿಯಲ್ಲೇ ಕರ್ನಾಟಕದ ಇತರ ಬ್ಯಾಂಕ್‌ಗಳಲ್ಲಿ ಕೂಡ ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ. ಬ್ಯಾಂಕ್‌ಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡದಲ್ಲಿ ಸೇವೆ ಪಡೆಯುವುದು ಭಾಷಾ ಹಕ್ಕು ಹಾಗೂ ಆತ್ಮಗೌರವದ ಪ್ರಶ್ನೆ ಎಂದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 2: ಕರ್ನಾಟಕದಲ್ಲಿ ಸ್ಥಳೀಯ ಭಾಷೆ ಮಾತನಾಡಬಲ್ಲ ಅಧಿಕಾರಿಗಳನ್ನೇ ನೇಮಿಸಲು ಮುಂದಾಗಿರುವ ಬ್ಯಾಂಕ್ ಆಫ್ ಬರೋಡಾ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಇದಕ್ಕಾಗಿ ಹೋರಾಟ ನಡೆಸಿದ್ದ ಕನ್ನಡಪರ ಸಂಘಟನೆಗಳಿಗೆ ಹಾಗೂ ಧ್ವನಿ ಎತ್ತಿದ್ದ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ರಾಜ್ಯದಲ್ಲಿನ ಎಲ್ಲಾ ಬ್ಯಾಂಕ್​ಗಳೂ ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಎಂದರು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕಿಗೂ ಕನ್ನಡಿಗರೊಂದಿಗೆ ಕನ್ನಡದಲ್ಲೇ ಸ್ಪಂದಿಸಿ ವ್ಯವಹರಿಸುವ ಜವಾಬ್ದಾರಿ ಇದೆ. ಅದು ಕನ್ನಡಿಗರ ಭಾಷಾ ಹಕ್ಕು. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಬ್ಯಾಂಕುಗಳು ಕನ್ನಡ ಬಲ್ಲ ಅಭ್ಯರ್ಥಿಗಳ ನೇಮಕಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಸೂಕ್ತ ನಿಯಮ ರೂಪಿಸಬೇಕು ಒತ್ತಾಯಿಸುತ್ತೇನೆ. ಕನ್ನಡಿಗರು ತಮ್ಮದೇ ನೆಲದಲ್ಲಿ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಸೇವೆ ಪಡೆಯುವಾಗ ಭಾಷೆಯ ಅಡೆತಡೆ ಎದುರಿಸಬಾರದು. ಕನ್ನಡದಲ್ಲಿ ಸೇವೆ ಪಡೆಯುವುದು ಕನ್ನಡಿಗರ ಹಕ್ಕು. ಅದನ್ನು ಖಾತ್ರಿಪಡಿಸುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಇದು ಕೇವಲ ಉದ್ಯೋಗದ ಪ್ರಶ್ನೆಯಲ್ಲ, ಕನ್ನಡಿಗರ ಭಾಷಾ ಹಕ್ಕು ಮತ್ತು ಆತ್ಮಗೌರವದ ಪ್ರಶ್ನೆ. ಕರ್ನಾಟಕದಲ್ಲಿ ಸೇವೆ ನೀಡುವ ಸಂಸ್ಥೆಗಳಿಗೆ ಕನ್ನಡ ಗೊತ್ತಿರಬೇಕು. ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಕ್ಕೆ ಆದ್ಯತೆ ಇರಬೇಕು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us