ಕೆಪಿಎಸ್ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಮಾತು
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಅಕ್ರಮಗಳ ತನಿಖೆ ನಡೆಯುತ್ತಿದ್ದು, ಕಾನೂನು ತೊಡಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೆಪಿಎಸ್‌ಸಿ ವ್ಯವಸ್ಥೆಯ ಸುಧಾರಣೆ ಹಾಗೂ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಕೆಪಿಎಸ್ಸಿಯನ್ನೇ ಮುಚ್ಚಿದರೆ ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಲ್ಲಿನ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಗಳ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕ್ರಮದಲ್ಲಿ ಶಾಮೀಲಾದ ಹಲವರನ್ನು ಈಗಾಗಲೇ ಗುರುತಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚನೆಗೆ ಆಕ್ಷೇಪವಿಲ್ಲ ಎಂದರು. ಆದರೆ, ಅಧಿಕಾರಿಗಳ ನೇಮಕದಲ್ಲಿ ಹೊರಗಿನವರ ಹಸ್ತಕ್ಷೇಪದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬಿಟ್ಟ ವಿಚಾರದಲ್ಲಿ ಇತರರ ಪಾತ್ರದ ಕುರಿತು ಕಾನೂನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ, ಆಯೋಗವನ್ನೇ ಮುಚ್ಚುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಅಥವಾ ಅದನ್ನು ಹೇಗೆ ಸುಧಾರಿಸಬೇಕು ಎಂಬ ಬಗ್ಗೆ ಕಾನೂನಾತ್ಮಕವಾಗಿ ಚಿಂತನೆ ನಡೆಸುತ್ತೇವೆ. ಭ್ರಷ್ಟಾಚಾರದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ವಿದ್ಯುತ್ ಸಚಿವರಾಗಿದ್ದಾಗ ಪಾರದರ್ಶಕ ನೇಮಕಾತಿ ನಡೆಸಿದ್ದನ್ನು ಅವರು ಸ್ಮರಿಸಿದರು. ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

